ಇಂದು ಮಹಾ ಶಿವರಾತ್ರಿ. ಮಹಾದೇವನ ಆರಾಧಿಸುವ ಪುಣ್ಯದಿನ. ಶಿವನೊಲಿದರೆ ಭಯವಿಲ್ಲ ಎನ್ನುವಂತೆ ಅವನನ್ನು ಒಲಿಸಿಕೊಳ್ಳಲು ಸ್ಯಾಂಡಲ್ ವುಡ್ ಕೂಡ ಹಿಂದೆ ಬಿದ್ದಿಲ್ಲ. ಪರಶಿವನ ಮಹಿಮೆಯನ್ನು ಸಾರುವಂತಹ ಅನೇಕ ಚಿತ್ರಗಳನ್ನು ಮಾಡುವ ಮೂಲಕ ತೆರೆಯ ಮೇಲೂ ಶಿವನ ಅವತಾರಗಳನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿ
Advertisement
ಪೌರಾಣಿಕ ಚಿತ್ರಗಳಲ್ಲಿ ಶಿವನಿಲ್ಲದೇ ಚಿತ್ರಗಳೇ ಇಲ್ಲ ಎನ್ನುವಷ್ಟು ಶಿವ ದರ್ಶನ ಮಾಡಿದ್ದಾನೆ. ಕೆಲ ನಟರಂತೂ ಈಗಲೂ ಶಿವನಾಗಿಯೇ ಅಭಿಮಾನಿಗಳು ಹೃದಯದಲ್ಲಿ ಉಳಿದಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಹಲವು ಭಾಷೆಗಳಲ್ಲಿ ಮತ್ತು ಕಿರುತೆರೆಗಳಲ್ಲೂ ಶಿವನಾಮ ಸ್ಮರಣೆ ಮಾಡುವಂತಹ ಅನೇಕ ಚಿತ್ರಗಳು ಮತ್ತು ಧಾರಾವಾಹಿಗಳು ತೆರೆ ಕಂಡಿವೆ. ಮಹಾ ಶಿವರಾತ್ರಿ ದಿನದಂದು ಆ ಚಿತ್ರಗಳ, ಪಾತ್ರಗಳ ಒಂದು ನೋಟ. ಇದನ್ನೂ ಓದಿ : ಇಂದು ಮಹಾಶಿವರಾತ್ರಿ – ಆದಿ ಅಂತ್ಯವಿಲ್ಲದ ಶಿವನ ಆರಾಧಕರಿಗೆ ಇಂದು ಹಬ್ಬ
Advertisement
Advertisement
ಪೌರಾಣಿಕ ಸಿನಿಮಾಗಳನ್ನು ಮಾಡುವಾಗ, ಅದರಲ್ಲೂ ವಿಶೇಷವಾಗಿ ಪುರಾಣ ಪ್ರಸಂಗಗಳನ್ನು ಆಧರಿಸಿ ಚಿತ್ರಗಳನ್ನು ಮಾಡುವಾಗ ಅಲ್ಲಿ ಶಿವನಿರಲೇಬೇಕು. ಹಾಗಾಗಿ ಕೈಲಾಸ ವಾಸ ಶಿವನಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ಬೇಡರ ಕಣ್ಣಪ್ಪ ಸಿನಿಮಾದಿಂದ ಶಿವನಿಗೆ ಮತ್ತಷ್ಟು ಬೇಡಿಕೆಯೂ ಹೆಚ್ಚಾಗಿದೆ.
Advertisement
ಭೂ ಕೈಲಾಸ, ಭಕ್ತ ಸಿರಿಯಾಳ, ಗಿರಿಜಾ ಕಲ್ಯಾಣ, ಗಂಗೆ ಗೌರಿ, ಭಕ್ತ ಮಾರ್ಕಂಡೇಯ, ಸ್ವರ್ಣಗೌರಿ, ಶಿವ ಕೊಟ್ಟ ಸೌಭಾಗ್ಯ, ಭಕ್ತ ಮಲ್ಲಿಕಾರ್ಜುನ, ಶ್ರೀ ಮಂಜುನಾಥ, ಶಿವ ಮೆಚ್ಚಿದ ಕಣ್ಣಪ್ಪ, ಪಾರ್ವತಿ ಕಲ್ಯಾಣ ಹೀಗೆ ಶಿವನ ಕುರಿತಾಗಿ ಸಾಮಾಜಿಕ, ಭಕ್ತಿ ಪ್ರಧಾನ ಮತ್ತು ಪೌರಾಣಿಕ ಚಿತ್ರಗಳು ತೆರೆ ಕಂಡಿವೆ. ಪಿ.ಆರ್. ಕೌಂಡಿನ್ಯ ನಿರ್ದೇಶನದಲ್ಲಿ ಮೂಡಿ ಬಂದ ಶಿವರಾತ್ರಿ ಮಹಾತ್ಮೆಯಂತೂ ಶಿವನ ನಾನಾ ಅವತಾರಗಳನ್ನು ತೋರಿಸುವ ಮೂಲಕ ಜನಪ್ರಿಯತೆ ಪಡೆಯಿತು.
ಇವರು ಶಿವನ ಪಾತ್ರಧಾರಿಗಳು :
1954ರಲ್ಲಿ ತೆರೆಕಂಡ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ರಾಮಚಂದ್ರ ಶಾಸ್ತ್ರಿಗಳು ಶಿವನ ಪಾತ್ರ ಮಾಡಿದ್ದರು. ನಂತರ 1967ರಲ್ಲಿ ತೆರೆಕಂಡ ಪಾರ್ವತಿ ಕಲ್ಯಾಣ ಚಿತ್ರದಲ್ಲಿ ರಾಜ್ ಕುಮಾರ್ ಶಿವನಾಗಿ ಭಕ್ತರನ್ನು ಆವರಿಸಿಕೊಂಡ ರೀತಿ ಬಣ್ಣಿಸಲೆಸದಳ.
1973ರಲ್ಲಿ ಬಿಡುಗಡೆಯಾದ ದೂರದ ಬೆಟ್ಟ ಚಿತ್ರದಲ್ಲಿ ಉದಯ ಶಂಕರ್, 1981ರಲ್ಲಿ ರಿಲೀಸ್ ಆದ ಗುರು ಶಿಷ್ಯರು ಚಿತ್ರದಲ್ಲಿ ಶ್ರೀನಿವಾಸ್ ಮೂರ್ತಿ, 1983ರಲ್ಲಿ ತೆರೆಗೆ ಬಂದ ಕ್ರಾಂತಿಯೋಗಿ ಬಸವಣ್ಣ ಚಿತ್ರದಲ್ಲಿ ಅಶೋಕ್, 1988ರಲ್ಲಿ ಬಿಡುಗಡೆಯಾದ ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದಲ್ಲಿ ರಾಜಕುಮಾರ್, ಶಬರಿ ಮಲೆ ಸ್ವಾಮಿ ಅಯ್ಯಪ್ಪ, ಕೊಲ್ಲೂರು ಮೂಕಾಂಬಿಕಾ, ಮಹಾಸಾಧ್ವಿ ಮಲ್ಲಮ್ಮ ಹಾಗೂ ಬಾಲ ಶಿವ ಚಿತ್ರದಲ್ಲಿ ಶ್ರೀಧರ್, ಪ್ರಚಂಡ ಕುಳ್ಳ ಚಿತ್ರದಲ್ಲಿ ವಿಷ್ಣುವರ್ಧನ್, ಶ್ರೀಮಂಜುನಾಥ ಸಿನಿಮಾದಲ್ಲಿ ತೆಲುಗು ನಟ ಚಿರಂಜೀವಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಪಾಲಿಗೆ ಸಾಕ್ಷಾತ್ ಶಿವನೇ ಆಗಿದ್ದಾರೆ.
‘ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲವಯ್ಯ..’ ಎಂದು ವಚನಗಳು ಸಾರಿದ್ದರೂ, ನಾದದಲ್ಲಿಯೂ ಶಿವನನ್ನು ಕಂಡಿದ್ದಾರೆ ಚಿತ್ರಪ್ರೇಮಿಗಳು.
ಬೇಡರ ಕಣ್ಣಪ್ಪ ಸಿನಿಮಾದ ‘ಶಿವಪ್ಪ ಕಾಯೋ ತಂದೆ’ ಹಾಡಂತೂ ನಿತ್ಯಮಂತ್ರದಂತೆ ಕೇಳುತ್ತಲೇ ಇರುತ್ತದೆ. ಭೂಮಿಗೆ ಬಂದ ಭಗವಂತ ಸಿನಿಮಾದ ‘ಶಿವ ಶಿವ ಎಂದರೆ ಭಯವಿಲ್ಲ’, ಹಾಲುಂಡ ತವರು ಸಿನಿಮಾದ ‘ಏಳು ಶಿವ, ಏಳು ಶಿವ’, ಭಕ್ತ ಸಿರಿಯಾಳ ಸಿನಿಮಾದ ‘ಏಕೋ ಈ ಕೋಪ ಶಂಕರಾ’, ಚೆಲ್ಲಿದ ರಕ್ತ ಸಿನಿಮಾದ ಶಿವನೊಲಿದರೆ, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಪೆಂಟಗನ್ ಚಿತ್ರದ ‘ಕಾಯೋ ಶಿವ ಕಾಪಾಡೋ ಶಿವ’ ಹೀಗೆ ನೂರಾರು ಹಾಡುಗಳು ಶಿವನ ಕುರಿತಾಗಿಯೇ ಸಿನಿಮಾದಲ್ಲಿ ಬಂದಿವೆ.
ಧಾರಾವಾಹಿಗಳಲ್ಲೂ ನಾನಾ ನಟರು ಶಿವನ ಪಾತ್ರ ಮಾಡಿದ್ದಾರೆ. ಅದರಲ್ಲೂ ಹರಹರ ಮಹಾದೇವ ಧಾರಾವಾಹಿಯ ನಟ ವಿನಯ್ ಗೌಡ, ಕಿರುತೆರೆಯಲ್ಲೇ ನಾಲ್ಕನೇ ಬಾರಿಗೆ ನಾನಾ ಧಾರಾವಾಹಿಗಳಲ್ಲಿ ಶಿವನ ಪಾತ್ರ ಮಾಡಿ ಫೇಮಸ್ ಆಗಿದ್ದಾರೆ. ಒಂದು ರೀತಿಯಲ್ಲಿ ಶಿವನ ಪಾತ್ರ ಅಂದಾಕ್ಷಣ ಅವರೇ ನೆನಪಾಗುವಷ್ಟು ಶಿವನಾಗಿ ಅವರು ಜನರ ಮನಸ್ಸನ್ನು ಆವರಿಸಿಕೊಂಡಿದ್ದಾರೆ.
ಫೋಟೋ ಕೃಪೆ : ಪ್ರಗತಿ ಅಶ್ವತ್ಥನಾರಾಯಣ್