ಬೆಂಗಳೂರು: ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ. ಒಂದಿಬ್ಬರು ಕೇಳಿದ ಹಿನ್ನೆಲೆಯಲ್ಲಿ ಅವರಿಗೆ ಅನುದಾನ ನೀಡಿದ್ದೇವೆ. ಈ ಯೋಜನೆ ಕೆಲಸ ನಡೆಯಲಿದೆ. ತಲೆಕೆಡಿಸಿಕೊಳ್ಳುವುದು ಬೇಡ. ಇದೇ ವೇಳೆ ಸತ್ತೇಗಾಲದಿಂದ ನೀರು ಬರುವುದು ಯಾವಾಗ ಎಂದು ಕೇಳಿದಾಗ, ಕಾಲುವೆ ಕಾಮಗಾರಿ ನಡೆಯುತ್ತಿದ್ದು, ನಾನು ಕಾಮಗಾರಿ ಸ್ಥಳಕ್ಕೂ ಭೇಟಿ ನೀಡಿದ್ದೇನೆ. ಆ ಕೆಲಸ ಕೂಡ ಆಗಲಿದೆ ಎಂದರು. ಇದನ್ನೂ ಓದಿ: ಮುಂದಿನ 24-48 ಗಂಟೆಗಳಲ್ಲಿ ಇರಾನ್ ಮೇಲಿನ ದಾಳಿ ಅತ್ಯಂತ ಭೀಕರವಾಗಿರಲಿದೆ – US ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್
ವಿದೇಶಕ್ಕೆ ತೆರಳಿದ್ದ ಶಾಸಕರು ವಾಪಸ್ಸಾಗಿದ್ದು, ನಿಮ್ಮನ್ನು ಭೇಟಿ ಮಾಡಿದ್ದಾರಾ ಎಂದು ಕೇಳಿದಾಗ, ಬಂದು ಭೇಟಿ ಮಾಡುತ್ತಿದ್ದಾರೆ. ಪ್ರವಾಸದಲ್ಲಿ ಏನೆಲ್ಲಾ ನೋಡಿದರು ಎಂದು ತಿಳಿಸುತ್ತಿದ್ದಾರೆ ಎಂದು ತಿಳಿಸಿದರು.
ಬಜೆಟ್ ಬಗ್ಗೆ ಕೇಳಿದಾಗ, ನಮ್ಮ ಜಿಲ್ಲೆಯ ಕೆಲಸಗಳು ಬಜೆಟ್ ಮೇಲೆ ನಿಂತಿಲ್ಲ. ಬೇರೆಯವರಿಗೆ ಬಜೆಟ್ ಬೇಕಾಗಿರಬಹುದು, ನಮಗೆ ಬೇಡ. ಪೆನ್ನು ಪೇಪರ್ ನನ್ನ ಹತ್ತಿರವಿದೆ. ಜಿಲ್ಲೆಯ ಜನ ಬಜೆಟ್‌ನಿಂದ ಏನು ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಕೇಳಿದಾಗ, ಬಜೆಟ್ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಬಜೆಟ್ ಇರಲಿ, ಇಲ್ಲದಿರಲಿ, ನಾವು ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುತ್ತೇವೆ. ಇಡೀ ದೇಶದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಾತ್ರ ಒಂದು ಶಾಲೆಗೆ 15 ಕೋಟಿ ರೂ. ವೆಚ್ಚದಂತೆ 25 ಕೆಪಿಎಸ್ ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ನಾವು ಬಜೆಟ್‌ನಲ್ಲಿ ಬರೆಸಿದ್ದೇವಾ? ಈ ಯೋಜನೆ ಸೃಷ್ಟಿಕರ್ತರು ನಾವೇ. ಇಡೀ ರಾಜ್ಯದಲ್ಲಿ ಈ ಯೋಜನೆ ವಿಸ್ತರಿಸಲು ಹೊಸ ನೀತಿ ರೂಪಿಸಿದ್ದೇವೆ. ರಾಜ್ಯದೆಲ್ಲೆಡೆ 2 ಸಾವಿರ ಶಾಲೆಗಳ ನಿರ್ಮಾಣ ಮಾಡುವ ಗುರಿ ಇದೆ. ಬೇರೆಯವರಿಗೆ ಬಜೆಟ್ ಬೇಕಾಗುತ್ತದೆ. ನಮಗೆ ಬಜೆಟ್‌ನಲ್ಲಿ ಸೇರಿಸಿ ಕೆಲಸ ಮಾಡಬೇಕು ಎಂದೇನಿಲ್ಲ ಎಂದರು.
ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರದಲ್ಲಿ ನಮ್ಮ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸೇರಿಸಿದ್ದೆ, ಯಡಿಯೂರಪ್ಪ ಸರ್ಕಾರ ಬಂದ ನಂತರ ಅದನ್ನು ತೆಗೆದು ಚಿಕ್ಕಬಳ್ಳಾಪುರಕ್ಕೆ ಹಾಕಿದರು. ಈಗ ನಾವು ರಾಮನಗರ ಹಾಗೂ ಕನಕಪುರ ತಾಲ್ಲೂಕಿಗೂ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ. ಈಗ ಚನ್ನಪಟ್ಟಣಕ್ಕೂ ಖಾಸಗಿ ಮೆಡಿಕಲ್ ಕಾಲೇಜು ನೀಡಿದ್ದೇವೆ. ಕನಕಪುರ ಹಾಗೂ ರಾಮನಗರ ಮಧ್ಯೆ ದಯಾನಂದ ಸಾಗರ್ ಮೆಡಿಕಲ್ ಕಾಲೇಜು ಇದೆ. ಮುಂದೆ ಮಾಗಡಿ ಕ್ಷೇತ್ರಕ್ಕೆ ಏನು ಮಾಡಬೇಕು ಎಂಬ ಅರಿವು ಇದೆ ಎಂದು ತಿಳಿಸಿದರು.ಇದನ್ನೂ ಓದಿ: ಇರಾನ್ ವಿರುದ್ಧ ಕಾರ್ಯಾಚರಣೆಗೆ ವಾಯುನೆಲೆ ಕೊಡಲ್ಲ ಎಂದ ಸ್ಪೇನ್ ಜೊತೆ ವ್ಯಾಪಾರ ಒಪ್ಪಂದ ರದ್ದುಗೊಳಿಸಿದ ಟ್ರಂಪ್

