– ಮೈಸೂರು, ಮಂಡ್ಯ ಸೇರಿ ಹಲವು ಜಿಲ್ಲೆಗಳಲ್ಲಿ ಭ್ರೂಣ ಹತ್ಯೆ ಜಾಲ
– ಭ್ರೂಣ ಹತ್ಯೆ ತಡೆಯುವಲ್ಲಿ ಸರ್ಕಾರ ವಿಫಲ ಎಂದು ವಾಗ್ದಾಳಿ
ಕೊಪ್ಪಳ: ಇತ್ತೀಚೆಗೆ ಆಸ್ಪತ್ರೆಗಳು ಗರ್ಭಪಾತ ಮಾಡಿಸಿಕೊಳ್ಳಲು ಬರುವ ಮಹಿಳೆಯರ ಸ್ಥಿತಿ ನೋಡಿ ದರ ಫಿಕ್ಸ್ ಮಾಡುತ್ತಿವೆ. ಮದುವೆಯಾಗಿ ಹೆಣ್ಣು ಭ್ರೂಣ ಹತ್ಯೆಗೆ (Foeticide) ಬರುವ ಮಹಿಳೆಯರಿಗೆ ಒಂದು ದರವಾದರೆ, ಮದುವೆ ಆಗದೇ ಗರ್ಭ ಧರಿಸಿ ಬರುವವರಿಗೆ ಬೇರೆ ದರ ಪಡೆದು ಗರ್ಭಪಾತ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ (Hemalatha Nayak) ಗಂಭೀರ ಆರೋಪ ಮಾಡಿದ್ದಾರೆ.
ಕೊಪ್ಪಳದ (Koppala) ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗರ್ಭಪಾತ ಮಾಡಿಸಿಕೊಳ್ಳಲು ಬರುವ ಮಹಿಳೆಯರ ಸ್ಥಿತಿ ನೋಡಿಕೊಂಡು, ಆಸ್ಪತ್ರೆಗಳು ಬೆಲೆ ನಿರ್ಧಾರ ಮಾಡುತ್ತವೆ. ಮದುವೆಯಾಗಿ ಹೆಣ್ಣು ಭ್ರೂಣ ಹತ್ಯೆಗೆ ಬರುವ ಮಹಿಳೆಯರಿಗೆ ಒಂದು ದರವಾದರೆ, ಮದುವೆ ಆಗದೇ ಗರ್ಭ ಧರಿಸಿದವರಿಗೆ ಒಂದು ದರ ಪಡೆದು ಗರ್ಭಪಾತ ಮಾಡಲಾಗುತ್ತಿದೆ. ಇಂದರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಹಾಗೂ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿ ಕಾರಿದ್ದಾರೆ.
ಹೆಣ್ಣು ಮಕ್ಕಳಿಗೆ ಗ್ಯಾರಂಟಿ ಯೋಜನೆ (Guarantee Scheme) ಮೂಲಕ ಹಣ ನೀಡುತ್ತಿರುವ ರಾಜ್ಯ ಸರ್ಕಾರ, ಹೆಣ್ಣು ಭ್ರೂಣ ಹತ್ಯೆ ತಡೆಯುವ ಹಾಗೂ ವಿವಿಧ ಕಾರಣಕ್ಕೆ ಹತ್ಯೆ ಆಗುತ್ತಿರುವ ಹೆಣ್ಣು ಮಕ್ಕಳ ಸುರಕ್ಷತೆಗೆ ಗ್ಯಾರಂಟಿ ನೀಡುತ್ತಿಲ್ಲ. ಗರ್ಭಪಾತಕ್ಕೆ ಕನಿಷ್ಠ 25,000 ರೂ.ನಿಂದ 1 ಲಕ್ಷ ರೂ. ವರೆಗೆ ಹಣ ಪೀಕುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ ಸುಮಾರು 900ಕ್ಕೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಆಗಿವೆದೆ ಎಂದು ತನಿಖಾ ವರದಿಗಳು ಹೇಳುತ್ತಿವೆ. ಇನ್ನೂ ಗೊತ್ತಾಗದಂತೆ ಅದೆಷ್ಟು ಭ್ರೂಣಗಳನ್ನ ಹೊಸಕಿ ಹಾಕಿದ್ದಾರೆ ಎಂಬುದನ್ನು ಊಹೆ ಮಾಡಲು ಸಾಧ್ಯವಾಗುತ್ತಿಲ್ಲ. ಇಂಥ ಪ್ರಕರಣ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ.
ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಂತೂ ಹಣಕ್ಕಾಗಿ ವೈದ್ಯರು ಕ್ರೂರ ಕೃತ್ಯಕ್ಕೆ ಇಳಿದಿದ್ದಾರೆ. ಇತ್ತೀಚೆಗೆ ಹೊಸಕೋಟೆ, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿವೆ. ಈ ಎಲ್ಲ ಪ್ರಕಣಗಳನ್ನು ರಾಜ್ಯ ಸರ್ಕಾರ ನೆಪಮಾತ್ರಕ್ಕೆ ಎನ್ನುವಂತೆ ಸಿಐಡಿ ತನಿಖೆಗೆ ವಹಿಸಿದೆ. ಆದರೆ, ತನಿಖೆಯಲ್ಲಿ ಕಾರ್ಯ ಯಾವುದೇ ಪ್ರಗತಿ ಕಂಡಿಲ್ಲ. ಸರ್ಕಾರದ ಭಾಗವಾಗಿರುವವರೇ ಇಂತಹ ಹೀನ ಕೃತ್ಯಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.