ರಾಮನಗರದಲ್ಲಿ ಹೆಲ್ಮೆಟ್ ಕಡ್ಡಾಯ – ತಪ್ಪಿದ್ರೆ ಹೊಸ ರೂಲ್ಸ್ ಪ್ರಕಾರ ದಂಡ

Public TV
2 Min Read
helmet

ರಾಮನಗರ: ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ದಿನನಿತ್ಯ ಒಂದಲ್ಲ ಒಂದು ಅಪಘಾತಗಳು ನಡೆದು ಪ್ರಾಣಹಾನಿಯಾಗುತ್ತಲೇ ಇದೆ. ಆದರೆ ಇದೀಗ ಅಪಘಾತಗಳ ತಡೆ ಹಾಗೂ ಪ್ರಾಣಹಾನಿ ತಪ್ಪಿಸುವ ನಿಟ್ಟಿನಲ್ಲಿ ರಾಮನಗರ ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯವಾಗಿದ್ದು, ರೂಲ್ಸ್ ಬ್ರೇಕ್ ಮಾಡಿದವರಿಗೆ ಹೊಸ ರೂಲ್ಸ್ ಪ್ರಕಾರ ದಂಡ ವಿಧಿಸಲಾಗುತ್ತದೆ.

ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಬೈಕ್ ಸವಾರರು ಮಾತ್ರವಲ್ಲ ಹಿಂಬದಿ ಸವಾರರು ಹೆಲ್ಮೆಟ್ ಧರಿಸಿ ಸಂಚಾರ ನಡೆಸಬೇಕಿದೆ. ನೂತನ ಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಅನೂಪ್ ಶೆಟ್ಟಿಯವರು ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಹೀಗಾಗಿ ಈವರೆಗೂ ಸಂಚಾರಿ ನಿಯಮಗಳನ್ನ ಗಾಳಿಗೆ ತೂರಿದ್ದ ವಾಹನ ಸವಾರರಿಗೆ ಚಾಟಿ ಬೀಸಲು ದಂಡಾಸ್ತ್ರ ಪ್ರಯೋಗಿಸಿದ್ದಾರೆ. ಇದೀಗ ಕೊಪ್ಪಳದಲ್ಲಿ ಸಾಕಷ್ಟು ಅಕ್ರಮಗಳಿಗೆ ಬ್ರೇಕ್ ಹಾಕಿ ಉತ್ತಮ ಹೆಸರು ಗಳಿಸಿರುವ ಎಸ್‍ಪಿ ಅನೂಪ್ ಶೆಟ್ಟಿಯವರು ರಾಮನಗರದಲ್ಲೂ ಸಹ ಸಂಚಾರಿ ನಿಯಮಗಳ ಪಾಲನೆಗೆ ಖಡಕ್ ಆದೇಶ ನೀಡಿದ್ದಾರೆ. ಇದನ್ನೂ ಓದಿ:  ವಾಹನ ತಿದ್ದುಪಡಿ ಮಸೂದೆ ಪಾಸ್- ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ದಂಡ

vlcsnap 2019 08 18 09h22m46s902

ಹೆಲ್ಮೆಟ್ ಕಡ್ಡಾಯವಾಗಿದ್ದರೂ ಸಹ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯವಾಗಿರಲಿಲ್ಲ. ರೂಲ್ಸ್ ಬ್ರೇಕ್ ಮಾಡಿಕೊಂಡು ವಾಹನ ಸವಾರರು ಓಡಾಟ ನಡೆಸುತ್ತಿದ್ದರು. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಶೇ.40 ರಷ್ಟು ಅಪಘಾತ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಪ್ರಾಣಹಾನಿ ತಪ್ಪಿಸುವ ದೃಷ್ಟಿಯಿಂದ ಹಾಗೂ ಸಂಚಾರಿ ನಿಯಮಗಳ ಪಾಲನೆಗಾಗಿ ಜಿಲ್ಲೆಯಾದ್ಯಂತ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ಎಂದು ಎಸ್‍ಪಿ ಅನೂಪ್ ಎ.ಶೆಟ್ಟಿ ಅವರು ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯಾದ್ಯಂತ ಕಳೆದ 2013 ರಿಂದ ಇಲ್ಲಿಯ ತನಕ ರಸ್ತೆ ಅಪಘಾತದಲ್ಲಿ 300ಕ್ಕೂ ಹೆಚ್ಚು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಅದರಲ್ಲೂ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳು ಲೆಕ್ಕವೇ ಇಲ್ಲದಂತಾಗಿದೆ. ಹೀಗಾಗಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಹೆಲ್ಮೆಟ್ ಕಡ್ಡಾಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

vlcsnap 2019 08 18 09h23m29s435

ಸಂಚಾರಿ ನಿಯಮಗಳ ಪಾಲನೆ ಮಾಡದಿದ್ದಲ್ಲಿ ಹೊಸ ನಿಯಮದ ಪ್ರಕಾರ ದಂಡ ಪಾವತಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ಕೂಡ ನೀಡಲಾಗಿದೆ. ಈಗಾಗಲೇ ಜಿಲ್ಲೆಯ ಸಂಚಾರಿ ಠಾಣೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ರಸ್ತೆಗಿಳಿದು ಕಾರ್ಯನಿರ್ವಹಿಸುವ ಮುನ್ನ ತಮ್ಮಲ್ಲಿನ ಹಣದ ಲೆಕ್ಕ ಕೊಡುವಂತೆ ಆಯಾ ಠಾಣೆಯ ಇನ್ಸ್‌ಪೆಕ್ಟರ್‌ಗಳು ಸೂಚನೆ ನೀಡಲಾಗಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಿದ್ದಾರೆ. ನೂತನ ಎಸ್‍ಪಿ ಅವರ ಕಾರ್ಯ ವೈಖರಿಯನ್ನ ಕೇಳಿ ತಿಳಿದವರು ಹೆಲ್ಮೆಟ್ ಕಡ್ಡಾಯಕ್ಕೆ ಸ್ವಾಗತ ಕೋರಿದ್ದಾರೆ ಎಂದು ಬೈಕ್ ಸವಾರರು ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *