ರಾಯಚೂರಿನಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳ – ಹೆಲ್ಮೆಟ್ ಹಾಕದವರಿಗೆ ಪೊಲೀಸರ ‘ದಂಡಾಸ್ತ್ರ’

Public TV
2 Min Read
raichuru accident 1

– 9 ದಿನದಲ್ಲಿ 33 ಲಕ್ಷ ರೂ. ದಂಡ ವಸೂಲಿ

ರಾಯಚೂರು: ಬಿಸಿಲಿನ ಕಾರಣಕ್ಕೆ ಬಿಸಿಲನಾಡು ರಾಯಚೂರು (Raichuru) ಜಿಲ್ಲೆಯ ಬೈಕ್ ಸವಾರರಿಗೆ ಇಷ್ಟು ದಿನ ನೀಡಲಾಗಿದ್ದ ಹೆಲ್ಮೆಟ್ ವಿನಾಯಿತಿ ಈಗ ಮುಕ್ತಾಯವಾಗಿದೆ. ಪೊಲೀಸ್ ಇಲಾಖೆ ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಿದೆ. ಹೀಗಾಗಿ, ಪೊಲೀಸರು ದಂಡ ವಸೂಲಿಯಲ್ಲಿ ಹೊಸ ದಾಖಲೆಯನ್ನೇ ಬರೆಯುತ್ತಿದ್ದಾರೆ. ಹೆಲ್ಮೆಟ್‌ಗಳ ವ್ಯಾಪಾರವೂ ಜಿಲ್ಲೆಯಲ್ಲಿ ಜೋರಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಸವಾರರು ಮಾತ್ರವಲ್ಲದೇ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ. ಆದರೆ, ಬಿರು ಬಿಸಿಲಿನ ಕಾರಣಕ್ಕೆ ರಾಯಚೂರು, ಬಳ್ಳಾರಿ, ಕೊಪ್ಪಳ, ಕಲಬುರ್ಗಿಯಲ್ಲಿ ಬೈಕ್ ಸವಾರರ ಹೆಲ್ಮೆಟ್ ಬಳಕೆಗೆ ವಿನಾಯಿತಿ ನೀಡಲಾಗಿತ್ತು. ಸ್ವ-ಇಚ್ಛೆಯಿಂದ ಕೆಲವರು ಮಾತ್ರ ಹೆಲ್ಮೆಟ್ ಧರಿಸುತ್ತಿದ್ದರು. ಆದರೆ, ರಾಯಚೂರು ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು ಸಾವಿನ ಸಂಖ್ಯೆಯೂ ಜಾಸ್ತಿ ಆಗಿದೆ. ಹೀಗಾಗಿ ಪೊಲೀಸ್ ಇಲಾಖೆ ರಾಯಚೂರಲ್ಲಿ ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಿದೆ. ಇದನ್ನೂ ಓದಿ: ಕ್ಯೂಬಾದಲ್ಲಿ ಒಂದೇ ಗಂಟೆಯಲ್ಲಿ 2 ಪ್ರಬಲ ಭೂಕಂಪ

ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ 500 ರೂ. ದಂಡ ವಿಧಿಸಲಾಗುತ್ತಿದೆ. ನ.1 ರಿಂದ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಕಳೆದ 9 ದಿನಗಳಲ್ಲಿ 6,632 ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, 33,17,500 ರೂ. ದಂಡ ವಸೂಲಿ ಮಾಡಿದ್ದಾರೆ. ಪ್ರತಿದಿನ ಸರಾಸರಿ 740 ಪ್ರಕರಣ ದಾಖಲಾಗುತ್ತಿದೆ. 3 ಲಕ್ಷ ರೂಪಾಯಿಗೂ ಅಧಿಕ ದಂಡ ವಸೂಲಿಯಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಹೆಲ್ಮೆಟ್ ವ್ಯಾಪಾರವೂ ಜೋರಾಗಿದ್ದು, ದಿನದಿಂದ ದಿನಕ್ಕೆ ಹೆಲ್ಮೆಟ್ ಧರಿಸುವವರ ಸಂಖ್ಯೆ ಹೆಚ್ಚಾಗಿದೆ.

ಕಳೆದ 3 ವರ್ಷಗಳಲ್ಲಿ ಅಪಘಾತಗಳಿಂದ ಜಿಲ್ಲೆಯಲ್ಲಿ 1,184 ಜನ ಸಾವನ್ನಪ್ಪಿದ್ದಾರೆ. 2024ರಲ್ಲಿ 300ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವುದರಿಂದ ಪೊಲೀಸ್ ಇಲಾಖೆ ಬೈಕ್ ಸವಾರರ ಸುರಕ್ಷತೆ ದೃಷ್ಟಿಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಹೆಲ್ಮೆಟ್ ಕಡ್ಡಾಯಗೊಳಿಸುವ ಜೊತೆಗೆ ಸರ್ಕಾರ ರಸ್ತೆಗಳ ಸುಧಾರಣೆಗೂ ಮುಂದಾಗಬೇಕು ಅಂತಾ ಜಿಲ್ಲೆಯ ಜನ ಆಗ್ರಹಿಸಿದ್ದಾರೆ. ಹದಗೆಟ್ಟ ರಸ್ತೆಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರ ದುಡ್ಡಿನ ದುರಾಸೆಯಿಂದ ಕರ್ನಾಟಕದಲ್ಲಿ ಹತ್ಯಾಕಾಂಡ ನಡೆದಿದೆ: ಪ್ರಿಯಾಂಕ್‌ ಖರ್ಗೆ ಬಾಂಬ್‌

ಹೆಲ್ಮೆಟ್ ಕಡ್ಡಾಯಗೊಳಿಸಿರುವುದಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಬೈಕ್ ಸವಾರರು ದಂಡಕ್ಕೆ ಹೆದರಿದ್ದಾರೆ. ಬೇಸಿಗೆಯಲ್ಲಿ ವಿನಾಯಿತಿ ಕೊಡಬೇಕು ಎಂದು ಕೇಳುತ್ತಿದ್ದಾರೆ. ಅಪಘಾತಗಳ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೆಲ್ಮೆಟ್ ಕಡ್ಡಾಯ ಜೊತೆಗೆ ರಸ್ತೆ ಸುರಕ್ಷಿತ ನಿಯಮಗಳ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಜನ ಆಗ್ರಹಿಸಿದ್ದಾರೆ.

Share This Article