– ರಸ್ತೆ ಕಾಣದೆ ಆಂಬ್ಯುಲೆನ್ಸ್ಗೆ ಲಾರಿ ಡಿಕ್ಕಿ
– ನೀರಲ್ಲೇ ನಿಂತು ಕರ್ತವ್ಯ ನಿರ್ವಹಿಸಿದ ಟ್ರಾಫಿಕ್ ಪೊಲೀಸರು
– ರಸ್ತೆಯಲ್ಲಿ ನಿಂತ ನೀರನ್ನು ಚರಂಡಿಗೆ ಹರಿಸಲು ಪೊಲೀಸರ ಪರದಾಟ
ಬೆಂಗಳೂರು: ನಗರದಲ್ಲಿ ರಾತ್ರಿಯಿಡಿ ಸುರಿದ ಭಾರೀ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಔಟರ್ ರಿಂಗ್ ರೋಡ್, ಹೆಚ್ಎಸ್ಆರ್ ಲೇಔಟ್, ಅಗರಲೇಕ್, ಕಾಡುಬೀಸನಹಳ್ಳಿ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. 9 ಕಿಮೀ ಕ್ರಮಿಸೋದಕ್ಕೆ 1 ಗಂಟೆಗಳ ಕಾಲ ಟ್ರಾಫಿಕ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ದಾರೆ.
ಮಳೆ, ರಸ್ತೆಗುಂಡಿ, ರಸ್ತೆಯಲ್ಲಿ ನೀರು ನಿಂತು ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಆಗುತ್ತಲೇ ಇರುತ್ತದೆ. ಇದರ ನಡುವೆ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಮತ್ತಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಮಲ್ಲೇಶ್ವರಂನಲ್ಲಿ ಮರ ಬಿದ್ದು ವಾಹನಗಳು ಜಖಂ – ದಿನ ಮಲಗೋ ಹಾಗೆ ಕಾರಲ್ಲೇ ಮಲಗಿದ್ರೆ ನನ್ನ ಕತೆ ಅಷ್ಟೇ ಎಂದ ಚಾಲಕ!
ವೈಟ್ ಫೀಲ್ಡ್, ಮಾರತಹಳ್ಳಿ, ಔಟರ್ ರಿಂಗ್ ರೋಡ್ ಸುತ್ತಮುತ್ತ ರಾತ್ರಿ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದ್ದಾರೆ. ವೈಟ್ ಫೀಲ್ಡ್ನ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟಿದ್ದಾರೆ. ಟ್ರಾಫಿಕ್ ಪೊಲೀಸರು ನೀರಲ್ಲೇ ನಿಂತು ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೇ ವೈಟ್ ಫೀಲ್ಡ್ ಮತ್ತು ಹೆಚ್ಎಎಲ್ನ ಕೆಲವೆಡೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಸ ಕಟ್ಟಿ ರಸ್ತೆಯಲ್ಲಿ ನಿಂತಿದ್ದ ನೀರನ್ನು ಚರಂಡಿಗೆ ಹರಿಸಲು ಸಹ ಪ್ರಯತ್ನಪಟ್ಟಿದ್ದಾರೆ.
ನೆಲಮಂಗಲದ ಮಾದನಾಯಕನಹಳ್ಳಿ ಬಳಿ ಬೆಳಂಬೆಳಗ್ಗೆ ಸುರಿದ ಮಳೆಯಿಂದಾಗಿ ರಸ್ತೆ ಕಾಣದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಚರ್ ಲಾರಿ, 108 ಆಂಬುಲೆನ್ಸ್ಗೆ ಡಿಕ್ಕಿಯಾಗಿದೆ. ಚಿಕ್ಕಬಾಣಾವಾರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು (ಸೆ.29) ಮುಂಜಾನೆ ಸಹ ನಗರದಲ್ಲಿ ಮಳೆ ಮುಂದುವರಿದಿದೆ. ಮಳೆಯಿಂದ ಬೆಳಗ್ಗೆ ಕೆಲಸಗಳಿಗೆ ತೆರಳುವವರಿಗೆ ತೊಂದರೆ ಉಂಟಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆಯಾಗಲಿದೆ. ಬೆಂಗಳೂರಿನಲ್ಲೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ರಾಜ್ಯದ 19 ಜಿಲ್ಲೆಗಳಿಗೆ ಮುಂದಿನ 3 ಗಂಟೆ ಭಾರಿ ಮಳೆ ಮುನ್ಸೂಚನೆ

