– ಕೇರಳ, ಉತ್ತರಾಖಂಡ್‍ನಲ್ಲಿ ರೆಡ್ ಅಲರ್ಟ್
ಬೆಂಗಳೂರು: ಮೈಸೂರು ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಕಮ್ಮಿಯಾಗೋ ಯಾವುದೇ ಲಕ್ಷಣ ಕಾಣ್ತಿಲ್ಲ. ಕಾರಣ ಕಬಿನಿ ನದಿಯ ಭೋರ್ಗರತೆ ಇನ್ನೂ ಜೋರಾಗಿಯೇ ಇದೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರ ನೀಡುತ್ತಿರುವ ಕಾರಣ ಎಲ್ಲೆಡೆ ಜಲಪ್ರವಾಹ ಉಂಟಾಗಿದೆ. ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮೇಲೆ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಹೆದ್ದಾರಿ ಸಂಪರ್ಕ ಕಡಿತದಿಂದ ವಾಹನ ಸವಾರರ ಪರದಾಡುತ್ತಿದ್ದಾರೆ. ಇತ್ತ ನಂಜನಗೂಡಿನ ದೇಗುಲದ ಸನಿಹದವರೆಗೂ ನೀರು ಬಂದು ನಿಂತಿದೆ.
ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಕುಮಾರಾಧಾರಾ ನದಿ ಉಕ್ಕಿ ಹರಿಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ – ಪಂಜ ರಾಜ್ಯ ಹೆದ್ದಾರಿಯ ಸಂಪರ್ಕ ಕಡಿತಗೊಂಡಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಆ.17ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಧಾರಾಕಾರ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಿ ಮಾಡಿ ಡಿಡಿಪಿಐ ಮಚಾಡೋ ಆದೇಶ ಹೊರಡಿಸಿದ್ದಾರೆ.
Advertisement
ಹಾರಂಗಿ ಜಲಾನಯನ ಪ್ರದೇಶದಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಜಲಾಶಯದಿಂದ ಕ್ರೆಸ್ಟ್ ಗೇಟ್‍ಗಳ ಮೂಲಕ 35 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುವುದು. ಈ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿರುವ ನಿವಾಸಿಗಳು ಎಚ್ಚರದಿಂದವಂತೆ ಹಾರಂಗಿ ಜಲಾಶಯದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸೂಚಿಸಿದ್ದಾರೆ. ಮಲೆನಾಡಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಬೃಹತ್ ಗಾತ್ರದ ಮರಗಳು ಧರೆಗುರುಳಿದ್ದು, ಚಿಕ್ಕಮಗಳೂರು-ಶೃಂಗೇರಿ ರಸ್ತೆ ಸಂಚಾರ್ ಬಂದ್ ಆಗಿರುವ ಘಟನೆ ಆಲ್ದೂರು ತಾಲೂಕಿನ ಆರೆನೂರು ಗ್ರಾಮದಲ್ಲಿ ನಡೆದಿದೆ. ಬಳಿಕ ಸ್ಥಳೀಯರು ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವು ಮಾಡಿದ್ರು. ಇತ್ತ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ, ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ಶಾಲಾ-ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ.
Advertisement
ಹಾಸನ ಜಿಲ್ಲೆಯ ವಿವಿಧೆಡೆ ಮಳೆ ಹಿನ್ನೆಲೆ, ಸಕಲೇಶಪುರ-ಆಲೂರು-ಬೇಲೂರು ತಾಲೂಕಿನ ಮಕ್ಕಳ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಶಾಲೆಗಳಿಗೆ ರಜೆ ನೀಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಅವಕಾಶ ಸರ್ಕಾರಿ ಶಾಲೆಗಳ ಎಸ್.ಡಿ.ಎಂ.ಸಿ. ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ಅಂತ ಕ್ಷೇತ್ರ ಶಿಕ್ಷಣಾಧಿಕಾರಿ ತಮ್ಮಣ್ಣಶೆಟ್ಟಿ ಸೂಚನೆ ನೀಡಿದ್ದಾರೆ. ಇನ್ನು ಮುಂದಿನ ಶೈಕ್ಷಣಿಕ ದಿನಗಳಲ್ಲಿ ಈ ರಜೆಗಳ ಬೋಧನಾ ಅವಧಿಯನ್ನು ಸರಿದೂಗಿಸುವ ಷರತ್ತು ಮೇರೆಗೆ ಈ ಕುರಿತು ಕ್ರಮ ವಹಿಸಿ ಅಂತ ಸೂಚನೆ ನೀಡಿದ್ದಾರೆ. ಕೊಡಗು ಜಿಲ್ಲೆಯಾಧ್ಯಂತ ಭಾರಿ ಗಾಳಿ ಮಳೆಯಿಂದಾಗಿ ಅಕ್ಷರಶಃ ಜನರು ನಲುಗಿ ಹೋಗಿದ್ದಾರೆ. ಜಿಲ್ಲೆಯ ಸೋಮವಾರಪೇಟೆ ವಿರಾಜಪೇಟೆ ತಾಲೂಕಿನ ಭಾಗಗಳಲ್ಲಿಯೂ ಭಾರಿ ಮಳೆಯಾಗಿದ್ದು, ಹಲವು ಗ್ರಾಮಗಳು ಕಾರ್ಗತ್ತಲಲ್ಲಿ ಮುಳುಗಿವೆ. ಭಾರಿ ಗಾಳಿಗೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದನ್ನೂ ಓದಿ: ಪ್ರಾಣವನ್ನು ಲೆಕ್ಕಿಸದೇ ಮಗುವನ್ನು ರಕ್ಷಿಸೋದೇ ಗುರಿಯಾಗಿತ್ತು: ಎನ್‍ಡಿಆರ್‌ಎಫ್ ಸಿಬ್ಬಂದಿ
Advertisement
ಕರ್ನಾಟಕ, ಕೇರಳ, ಆಂಧ್ರ ಸೇರಿ ಉತ್ತರದ ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಅಸ್ಸಾಂ, ಒಡಿಶಾದಲ್ಲಿ ಮಳೆ ರೌದ್ರಾವತಾರ ತೋರಿಸಿದೆ. ಇನ್ನೂ ಎರಡ್ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತ್ತರಾಖಂಡ್ ಮತ್ತು ಕೇರಳದಲ್ಲಿ ಮರಣಮಳೆಯಿಂದಾಗಿ ರೆಡ್ ಅಲರ್ಟ್ ಪ್ರಕಟಿಸಲಾಗಿದೆ. ಕೇರಳದಲ್ಲಿ ಇದೂವರೆಗೆ 37 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಕೇರಳದ ಸ್ಥಿತಿ ಭಯಾನಕವಾಗಿದ್ದು ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಭೂಕುಸಿತಗಳು ಸಂಭವಿಸುತ್ತಲೇ ಇವೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ಯೋಧರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಇಡುಕ್ಕಿ ಡ್ಯಾಂನಿಂದ ನೀರು ಬಿಟ್ಟಿರೋ ಕಾರಣ ಚೆರಂತೋನಿ ಸಮೀಪ ರಸ್ತೆಗೆನೀರು ನುಗ್ಗಿದ್ದು, ಯೋಧರೊಬ್ಬರು ಮಗವನ್ನು ಹೊತ್ತು ಓಡುವ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.
Advertisement
ಉತ್ತರಾಖಂಡ್‍ನಲ್ಲೂ ಸಹ ಭಾರೀ ಮಳೆ ಆಗ್ತಿದೆ. ಗುಡ್ಡಗಳು ನೋಡನೋಡುತ್ತಲೇ ಕುಸಿಯುತ್ತಿವೆ. ಮನೆಗಳು ಧರೆಗೆ ಉರುಳುತ್ತಿವೆ. ಕಾರೊಂದು ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಿಹಾರದಲ್ಲಿ ಸಹ ಮಳೆ ಅಬ್ಬರ ಜೋರಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಈಜುತ್ತಲೇ ಶಾಲೆಯಿಂದ ಮರಳಿದ್ದಾರೆ. ನಿರಂತರ ಮಳೆಗೆ ಒಡಿಶಾದ ಭುವನೇಶ್ವರದ ರಸ್ತೆಗಳು ಜಲಾವೃತವಾಗಿದೆ. ನೂರಾರು ವಾಹನಗಳು ನೀರಲ್ಲಿ ಮುಳುಗಿವೆ. ಇತ್ತ ತೆಲಂಗಾಣದಲ್ಲೂ ಮಳೆಯಬ್ಬರವಿದ್ದು, ನಗರಂ ಅನ್ನೋ ಹಳ್ಳಿಯಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ಗರ್ಭಿಣಿಯನ್ನು ಅಂಬ್ಯುಲೆನ್ಸ್ ಬಳಿಗೆ ಎತ್ಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಯ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews