ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿಯಲ್ಲಿ ಅಬ್ಬರದ ಮಳೆಯಾಗುತ್ತಿದೆ. ಮಳೆಯ (Rain) ಅಬ್ಬರದಿಂದ ಹೊನ್ನಾವರ (Honnavar) ತಾಲೂಕಿನ ರಾಮತೀರ್ಥ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದು ಹೆದ್ದಾರಿಯ ಮೇಲೆ ಬಿದ್ದಿದೆ.
ಅದೃಷ್ಟವಶಾತ್ ಆ ಸಂದರ್ಭದಲ್ಲಿ ಯಾವುದೇ ವಾಹನ ಸಂಚಾರ ಮಾಡದ ಕಾರಣ ದೊಡ್ಡ ಅವಘಡ ಸಂಭವಿಸುವುದು ತಪ್ಪಿದೆ. ಹೊನ್ನಾವರ ಭಾಗದಿಂದ ಮಂಗಳೂರ ಕಡೆ ತೆರಳುವ ರಾಷ್ಟ್ರೀಯ ಹೆದ್ದಾರಿ ಮಾರ್ಗದ ರಸ್ತೆ ಇದಾಗಿದ್ದು, ಮಳೆಯ ಅಬ್ಬರಕ್ಕೆ ನಿರಂತರವಾಗಿ ಗುಡ್ಡ ಕುಸಿಯುತ್ತಿದೆ. ಗುಡ್ಡ ಕುಸಿತ ಹಿನ್ನಲೆಯಲ್ಲಿ ವಾಹನ ಸವಾರರಿಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಹೆದ್ದಾರಿ ಪ್ರಾಧಿಕಾರ ಹಾಗೂ ಐ.ಆರ್.ಬಿ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ರಾತ್ರಿ ಮಳೆಗೆ ಭೂಕುಸಿತ – ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ
ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿರುವುದರಿಂದ ಹಾಗೂ ಗುಡ್ಡದ ಮೇಲ್ಭಾಗದಲ್ಲಿ ಬಿರುಕುಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸದ್ಯ ಆ ಪ್ರದೇಶದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದ ಭೂಕುಸಿತ – ಚುಂಗ್‌ಥಾಂಗ್‌ನಲ್ಲಿ ಸಿಲುಕಿದ 200 ಪ್ರವಾಸಿಗರು
