ಬೆಂಗಳೂರು: ನಗರದಲ್ಲಿ (Bengaluru) ಮುಂಗಾರು ಪೂರ್ವ ಮಳೆಯ (Rain) ಅಬ್ಬರ ಜೋರಾಗಿದೆ. ಮಲ್ಲೇಶ್ವರಂ, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಗಾಂಧಿನಗರ, ಕೆ.ಆರ್ ಸರ್ಕಲ್, ಶಿವಾನಂದ ಸರ್ಕಲ್, ಕಾರ್ಪೋರೇಷನ್ ಸರ್ಕಲ್ ಸುತ್ತಮುತ್ತ ಭಾರೀ ಮಳೆಯಾಗಿದೆ. ಮಳೆಯಿಂದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗಾಳಿ, ಮಳೆ ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲದಂತೆ ಹಾಗೂ ರಸ್ತೆಗಳಲ್ಲಿ ಓಡಾಡದಂತೆ ಸಾರ್ವಜನಿಕರಿಗೆ ಬಿಬಿಎಂಪಿ ಮನವಿ ಮಾಡಿದೆ.
ಮಲ್ಲೇಶ್ವರಂ 17ನೇ ಕ್ರಾಸ್‍ನಲ್ಲಿ ಕಾರಿನ ಪಕ್ಕದಲ್ಲೇ ಮರದ ರೆಂಬೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ. ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಆನಂದರಾವ್ ಸರ್ಕಲ್ ಸುತ್ತಮುತ್ತ ಜೋರು ಮಳೆಯಾಗಿದ್ದು, ವಾಹನ ಸವಾರರು ಹಾಗೂ ಬೀದಿ ಬದಿ ವ್ಯಾಪಾರಿಗಳು ಪರದಾಡಿದ್ದಾರೆ. ಕೆಆರ್ ಮಾರ್ಕೆಟ್, ಟೌನ್ ಹಾಲ್, ಕೆಜಿ ರೋಡ್, ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಮಳೆಯಿಂದ ಟ್ರಾಫಿಕ್ ಉಂಟಾಗಿದೆ.
ಶೇಷಾದ್ರಿಪುರಂ ಬಳಿ ರಸ್ತೆಯಲ್ಲಿ ಕಾರಿನ ಮೇಲೆ ಮರದ ರೆಂಬೆ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಮೈಸೂರು ರಸ್ತೆಯ ಕೆಲವೆಡೆ ಕೆರೆಯಂತೆ ನೀರು ನಿಂತಿದೆ. ಸರ್ಜಾಪುರದ ಸೋಂಪುರ ಗೇಟ್ ಬಳಿ ಬೃಹತ್ ಹೋರ್ಡಿಂಗ್ಸ್ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಆಗಿಲ್ಲ.
ಮಲ್ಲೇಶ್ವರಂನ ಹೂವಿನ ಮಾರ್ಕೇಟ್‍ನ ಅಂಗಡಿಗಳಿಗೆ ನೀರು ನುಗ್ಗಿ, ಹೂಗಳು ಕೊಚ್ಚಿಹೋಗಿದ್ದು, ವ್ಯಾಪಾರಿಗಳು ಕಣ್ಣೀರಿಟ್ಟಿದ್ದಾರೆ. ಇನ್ನೂ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರದ ಕೊಂಬೆ ಕಾರಿನ ಮೇಲೆ ಬಿದ್ದು, ಕಾರು ಜಖಂಗೊಂಡಿದೆ.
ಶನಿವಾರ (ಮೇ 3) ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ಪಂದ್ಯಕ್ಕೆ ಬಹುತೇಕ ಮಳೆ ಅಡ್ಡಿ ಸಾಧ್ಯತೆ ಇದ್ದು, ಇಂದು ಅಭ್ಯಾಸ ಪಂದ್ಯಕ್ಕಾಗಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ಆಟಗಾರರು, ಮಳೆ ಹಿನ್ನೆಲೆ ಅರ್ಧಕ್ಕೇ ಮೊಟುಕುಗೊಳಿಸಿ ಮೈದಾನದಿಂದ ತೆರಳಿದ್ದಾರೆ.