ಬೆಂಗಳೂರು: ಶನಿವಾರ ರಾತ್ರಿ ಸುರಿದ ಗುಡುಗು ಸಿಡಿಲಿನ ಭಾರೀ ಮಳೆ ನಗರದಲ್ಲಿ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಕುರುಬರಹಳ್ಳಿಯಲ್ಲಿ ರಾಜಕಾಲುವೆಯ ನೀರಿಗೆ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದರೆ, ಹಲವೆಡೆ ಮರಗಳು ಧರೆಗೆ ಉರುಳಿ ಬಿದ್ದಿವೆ. ಮಳೆಯಿಂದಾಗಿ ಇಡೀ ನಗರವೇ ಜಾಮ್ ಆಗಿದ್ದರೆ, ತಗ್ಗು ಪ್ರದೇಶಗಳಿಗೆ ಎಂದಿನಂತೆ ನೀರು ನುಗ್ಗಿತ್ತು. ಎಲ್ಲೆಲ್ಲಿ ಏನೇನು ಆಗಿದೆ ಎನ್ನುವುದರ ವಿವರ ಇಲ್ಲಿದೆ.
30 ಗಿಳಿಗಳು ಸಾವು: ವರುಣನ ಆರ್ಭಟಕ್ಕೆ ರಾಜಾಜಿನಗರದ ಒರಿಯಾನ್ ಮಾಲ್ ಬಳಿ 30 ಗಿಣಿಗಳು ಸಾವನ್ನಪ್ಪಿವೆ. ಬಿರುಗಾಳಿಗೆ ಬೆದರಿ ಮರಗಳಿಂದ ಕೆಳಗೆ ಬಿದ್ದು ಮೃತಪಟ್ಟಿವೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ವೈಲ್ಡ್ ಲೈಫ್ ಟ್ರೂಪ್ ಸದಸ್ಯರು ಸುಮಾರು 20ಕ್ಕೂ ಹೆಚ್ಚು ಗಿಣಿಗಳನ್ನು ರಕ್ಷಿಸಿದ್ರು. ರಸ್ತೆಯಲ್ಲಿ ಸತ್ತು ಬಿದ್ದಿದ್ದ ಗಿಣಿಗಳನ್ನು ನೋಡಿದ್ರೆ ಎಂಥವರ ಕರುಳು ಚುರ್ ಎನ್ನುತ್ತಿತ್ತು.
Advertisement
Advertisement
Advertisement
ಹದ್ದಿಗೆ ಚಿಕಿತ್ಸೆ: ಮಲ್ಲೇಶ್ವರಂನಲ್ಲಿ ಸಾಲು ಸಾಲು ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿವೆ. ಹೀಗೆ ಉರುಳಿಬಿದ್ದಿರುವ ಮರಗಳ ಬಳಿಯೇ ರಣಹದ್ದೊಂದು ಮಳೆ- ಚಳಿಗೆ ಮುದುಡಿ ಕುಳಿತಿತ್ತು. ಎನಿಮಲ್ ರೆಸ್ಕ್ಯೂ ತಂಡಕ್ಕೆ ಕರೆ ಮಾಡಿ ಒಂದು ಗಂಟೆಯಾದರೂ ಬಾರದ ಕಾರಣ ಕೊನೆಗೆ ಪಬ್ಲಿಕ್ ಟಿವಿ ತಂಡವೇ ಅನಾರೋಗ್ಯಕ್ಕೆ ತುತ್ತಾದಂತಿದ್ದ, ಹಾರಲಾಗದ ಸ್ಥಿತಿಯಲ್ಲಿದ್ದ ರಣಹದ್ದನ್ನು ಹೆಬ್ಬಾಳದ ವೆಟರ್ನರಿ ಆಸ್ಪತ್ರೆಗೆ ಕೊಂಡೊಯ್ಯಿತು. ರಣಹದ್ದಿನ ಕತ್ತಿನ ಭಾಗದಲ್ಲಿ ಒಂದು ಗಾಯವಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗ್ತಿದೆ.
Advertisement
ನೀರಿನಲ್ಲಿ ಕಾರು: ಸಿಲ್ಕ್ ಬೋರ್ಡ್ ರಸ್ತೆಯಂತೂ ಅಂತೂ ಹೊಳೆಯಂತಾಗಿತ್ತು. ಐದಾರು ಅಡಿವರೆಗೂ ನೀರು ನಿಂತಿದ್ದ ಕಾರಣ, ಆ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರೊಂದು ಆಟಿಕೆಯ ಕಾರಿನಂತೆ ನೀರಿನಲ್ಲಿ ತೇಲಾಡುತ್ತಿತ್ತು. ಇಂತಹ ಪರಿಸ್ಥಿತಿಯಲ್ಲೇ ಲಾರಿಯೊಂದು ಹಾದುಹೋಗಿತ್ತು.
ಅಂಗಡಿಗಳಿಗೆ ನೀರು: ಮಡಿವಾಳ- ಸಿಲ್ಕ್ ಬೋರ್ಡ್ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಇದೇ ಪರಿಸ್ಥಿತಿ ಕಂಡು ಬಂತು. ರಸ್ತೆ ಯಾವುದು ಹಳ್ಳ ಯಾವುದು ಎಂಬುದು ತಿಳಿಯದಾಗಿತ್ತು. ಮೊಳಕಾಲುದ್ದು ನೀರು ನಿಂತು ಜನ ಪರದಾಡಿದ್ರು. ರಸ್ತೆ ಬದಿಯ ತರಕಾರಿ ಮತ್ತು ಹಣ್ಣಿನ ಅಂಗಡಿಗಳಿಗೆ ನೀರು ನುಗ್ಗಿತ್ತು. ವ್ಯಾಪಾರಸ್ಥರು ಪರದಾಡಿದ್ರು. ಮನೆಕಡೆ ಹೊರಟಿದ್ದ ಆಟೋಗಳು ನಿಂತಲ್ಲೇ ನಿಂತಿದ್ದವು.
ಮನೆಗೆ ನೀರು: ಮಳೆಯಿಂದಾಗಿ ರಾಜಾಜಿನಗರದ ಬಳಿಯಿರುವ ಗಾಯತ್ರಿನಗರದಲ್ಲಿ ಪುಟ್ಟಪುಟ್ಟ ಮನೆಯಲ್ಲಿ ವಾಸವಾಗಿರುವ ವ್ಯಾಪಾರಸ್ಥರು ರಾತ್ರಿಯಿಡಿ ಪಡಬಾರದ ಪಾಡು ಪಟ್ರು. ಡ್ರೈನೇಜ್ ನೀರು ಮನೆಯೊಳಗೆ ನುಗ್ಗಿದ್ರಿಂದ ಸುಮಾರು ಎರಡ್ಮೂರು ಗಂಟೆ ಪುಟ್ಟ ಮಕ್ಕಳನ್ನ ಕಂಕಳಲ್ಲಿ ಎತ್ತಿಕೊಂಡು ಮನೆಯಿಂದ ನೀರನ್ನ ಹೊರಹಾಕಿದ್ರು. ಈ ಸಮಸ್ಯೆ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ರೂ ಇದೂವರೆಗೂ ಕ್ರಮಕೈಗೊಂಡಿಲ್ಲ ಅಂತ ಇಲ್ಲಿನ ನಿವಾಸಿಗಳು ಆಕ್ರೋಶ ಹೊರಹಾಕಿದ್ರು.
ಕತ್ತಲಲ್ಲಿ ನಗರ: ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳು ಉರುಳಿಬಿದ್ದಿತ್ತು. ಕೆಲವೆಡೆ ಟ್ರಾನ್‍ಫಾರ್ಮರ್‍ಗಳು ಸುಟ್ಟುಹೋದವು. ಪರಿಣಾಮ ನಗರದ ಅರ್ಧಭಾಗದಲ್ಲಿ ಕತ್ತಲು ಆವರಿಸಿತ್ತು.
ಶಿವಾನಂದ ವೃತ್ತದ ರೈಲ್ವೆ ಹಳಿಯ ಮೇಲ್ಸೇತುವೆ ಕೆಳಭಾಗದಲ್ಲಿ ನೀರು ತುಂಬಿಕೊಂಡಿತ್ತು. ಕಾವೇರಿ ಜಂಕ್ಷನ್, ರಾಜಾಜಿನಗರ, ಬಸವೇಶ್ವರ ನಗರ, ಆರ್.ಟಿ.ನಗರ, ಶಾಂತಿನಗರ, ಆನಂದರಾವ್ ವೃತ್ತ, ಆರ್.ಟಿ.ನಗರ, ಎಚ್.ಎಸ್.ಆರ್. ಲೇಔಟ್ ಸೇರಿ 40 ಕಡೆಗಳಲ್ಲಿ ಮರಗಳು ನೆಲಕ್ಕೆ ಬಿದ್ದಿವೆ.
ಮೇಯರ್ ಸಂಚಾರ: ಮಳೆಯಿಂದ ಹಾನಿ ಉಂಟಾದ ಪ್ರದೇಶಗಳಿಗೆ ಮೇಯರ್ ಜಿ.ಪದ್ಮಾವತಿ ಅವರು ರಾತ್ರಿಯೇ ಭೇಟಿ ನೀಡಿ ಪರಿಶೀಲಿಸಿದರು.