– ಹಾರಂಗಿ ಜಲಾಶಯದಿಂದ 65 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
– ಕೆಆರ್‌ಎಸ್‌ನಿಂದ ಹೊರ ಹರಿಯಲಿದೆ 1.50 ಲಕ್ಷ ಕ್ಯೂಸೆಕ್ ನೀರು
ಮಡಿಕೇರಿ/ಮಂಡ್ಯ/ಮೈಸೂರು: ಮಡಿಕೇರಿ, ಮೈಸೂರು ಹಾಗೂ ಗಡಿ ರಾಜ್ಯ ಕೇರಳದಲ್ಲಿ ಮತ್ತೆ ಮಳೆ ಮುಂದುವರಿದಿರುವುದರಿಂದ ಜನರು ಮತ್ತಷ್ಟು ಸಂಕಷ್ಟಕ್ಕೊಳಗಾಗುವ ಸಾಧ್ಯತೆ ಇವೆ. ಈಗಾಗಲೇ ಹಾರಂಗಿ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ನದಿ ಪಾತ್ರದ ತಗ್ಗು ಪ್ರದೇಶದ ರೈತರ ಗದ್ದೆಗಳಿಗೆ ನೀರು ನುಗ್ಗಿದೆ. ಈ ನಡುವೆ ಕೇಂದ್ರ ಜಲಸಂಪನ್ಮೂಲ ಇಲಾಖೆ ನೆರೆ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ. ಕೊಡಗು ಜಿಲ್ಲೆಯ ಕೂಡಿಗೆ ಹಾಗೂ ಮೈಸೂರಿನ ಚುಂಚನಕಟ್ಟೆ ಬಳಿಕ ಮಂಗಳವಾರ ಮಧ್ಯರಾತ್ರಿ ಅಥವಾ ಬುಧವಾರ ಮುಂಜಾನೆ ವೇಳೆ ನೆರೆ ಪರಿಸ್ಥಿತಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಜಲ ಆಯೋಗದ ನೆರೆ ಮುನ್ನೆಚ್ಚರಿಕಾ ಕೇಂದ್ರ ಮಾಹಿತಿ ನೀಡಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
Advertisement
ಹಾರಂಗಿ ಡ್ಯಾಮ್‍ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಅಪಾಯದ ಮಟ್ಟ ತಡೆಯುವ ಉದ್ದೇಶದಿಂದ 65 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದೆ. ಇತ್ತ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾನಯನ ಪ್ರದೇಶದಲ್ಲಿಯೂ ಮಳೆ ಹೆಚ್ಚಾಗುತ್ತಿದ್ದು, ಡ್ಯಾಮ್ ಗೆ 65,600 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಭದ್ರತೆಯ ದೃಷ್ಟಿಯಿಂದ ಮಂಗಳವಾರ ನದಿಗೆ ನಾಲ್ಕು ಕ್ರಸ್ಟ್ ಗೇಟ್ ಮತ್ತು ವಿದ್ಯುತ್ ಘಟಕದ ಮೂಲಕ 65 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.
Advertisement
ಭಾರೀ ಪ್ರಮಾಣದ ನೀರನ್ನು ಹೊರಬಿಟ್ಟಿದ್ದರಿಂದ ಹಾರಂಗಿ ನದಿ ಪಾತ್ರದ ತಗ್ಗು ಪ್ರದೇಶ ರೈತರ ಗದ್ದೆಗಳಿಗೆ ನೀರು ನುಗ್ಗಿದೆ. ಹುದಗೂರು ಗ್ರಾಮದ 8 ಜನ ರೈತರ ನಾಟಿ ಮಾಡಿದ್ದ 10 ಎಕರೆಗೂ ಹೆಚ್ಚು ಗದ್ದೆಗಳು ಹಾಗೂ ಕೂಡಿಗೆ ಗಾಮ್ರ ಪಂಚಾಯತ್ ವತಿಯಿಂದ ನಿವೇಶನ ನೀಡಲು ಕಾಯ್ದಿರಿಸಿದ್ದ ತಗ್ಗು ಪ್ರದೇಶವು ನೀರಿನಿಂದ ಜಲಾವೃತಗೊಂಡಿದೆ. ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೂಡಿಗೆ ಸೇತುವೆ ಅಂಚಿನವರೆಗೆ ನೀರು ಹರಿಯುತ್ತಿದೆ.
Advertisement
Advertisement
1.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ಕಾವೇರಿ ನದಿ ಪಾತ್ರದಲ್ಲಿ ಸಂಜೆಯಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಕೃಷ್ಣರಾಜ ಸಾಗರಕ್ಕೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಯೊಳಗೆ ಕೆಆರ್‌ಎಸ್ ಜಲಾಶಯದಿಂದ 1,20,000 ರಿಂದ 1,50,000 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡುವ ಸಾಧ್ಯತೆಯಿದೆ. ನದಿಯ ದಂಡೆ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ತಮ್ಮ ಆಸ್ತಿ-ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚನೆ ನೀಡಿದ್ದಾರೆ.
ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದು, ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಈಗಾಗಲೇ ಭರ್ತಿಯಾಗಿರುವ ಜಲಾಶಯಕ್ಕೆ 29,363 ಕ್ಯೂಸೆಕ್ ಒಳ ಹರಿವು ಇದೆ. ಈಗ ನದಿ, ನಾಲೆಗೆ ಸೇರಿ ಒಟ್ಟು 33,325 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
5 ವರ್ಷಗಳ ಬಳಿಕ ಉಪ್ಪಿನಂಗಡಿಯಲ್ಲಿ ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳ ಸಂಗಮವಾಗಿದೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಸಂಗಮವಾಗುತ್ತಿದ್ದಂತೆಯೇ ಭಕ್ತರು ನದಿಗೆ ಗಂಗಾಪೂಜೆ ಮಾಡಿದ್ದಾರೆ. ಈ ಹಿಂದೆ
2013 ರಲ್ಲಿ ಕೊನೆಯ ಬಾರಿಗೆ ಈ ಎರಡು ನದಿಗಳ ಸಂಗಮವಾಗಿತ್ತು.
124 ಮಿ.ಮೀ.ಗಿಂತಲೂ ಹೆಚ್ಚು ಪ್ರಮಾಣದಲ್ಲಿ ಕರಾವಳಿ ಮತ್ತು ಮಲೆನಾಡಿನಲ್ಲಿ ಇನ್ನು 4 ದಿನ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಕಡೆ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv