– ಕೆರೆ ಏರಿ ಒಡೆದು ನುಗ್ಗಿದ ನೀರು: ಜಮೀನಿಗೆ ತೆರಳದಂತೆ ರೈತರಿಗೆ ಸೂಚನೆ
ದಾವಣಗೆರೆ: ನಗರದಲ್ಲಿ (Davanagere) ಕಳೆದ ರಾತ್ರಿ ಸುರಿದ ಭಾರೀ ಮಳೆಗೆ (Rain) ಪಿಸಾಳೆ ಕಾಂಪೌಂಡ್‍ನ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇಲ್ಲಿನ ನಿವಾಸಿಗಳು ಇಡೀ ರಾತ್ರಿ ನಿದ್ರೆ ಇಲ್ಲದೇ ಸುರಕ್ಷಿತ ಸ್ಥಳಕ್ಕೆ ತೆರಳಲು ಪರದಾಡಿದ್ದಾರೆ.
ನಗರದ ಹಳೇ ಪಿಬಿ ರಸ್ತೆಯ ಪಕ್ಕದಲ್ಲೇ ಇರುವ ಪಿಸಾಳೆ ಕಾಂಪೌಂಡ್, ತಗ್ಗು ಪ್ರದೇಶದಲ್ಲಿರುವ ಕಾರಣ ಮಳೆ ನೀರು ವಸತಿ ಪ್ರದೇಶದೊಳಗೆ ನುಗ್ಗಿದೆ. ಪರಿಣಾಮ ಮನೆಯಲ್ಲಿರುವ ಸಾಮಗ್ರಿಗಳು ನೀರುಪಾಲಾಗಿವೆ. ಅಲ್ಲದೇ ಬೈಕ್‍ಗಳು ಕೂಡ ಮುಳುಗಡೆಯಾಗಿವೆ. ಪಾಲಿಕೆ ಸಿಬ್ಬಂದಿ ಸ್ಥಳದಲ್ಲಿದ್ದ ನೀರನ್ನು ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ.
ಇನ್ನೂ ಮಳೆಯ ಅಬ್ಬರಕ್ಕೆ ವಿಜಯನಗರ ಜಿಲ್ಲೆಯ ಕುರೇಮಾಗನಹಳ್ಳಿ ಕೆರೆ ಕೋಡಿ ಬಿದ್ದಿದೆ. ಅಲ್ಲದೇ ಕೆರೆ ಏರಿ ಕೂಡ ಒಡೆದಿದೆ. ಇದರಿಂದ ದಾವಣಗೆರೆ ಗಡಿಭಾಗದ ಜಗಳೂರು ಸೇರಿದಂತೆ ಕೆಲವು ಹಳ್ಳಿಗಳ ಜಮೀನಿಗೆ ನೀರು ನುಗ್ಗುತ್ತಿದೆ.
ಕೆರೆ ಏರಿ ಒಡೆದಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬರುವ ಸಾಧ್ಯತೆ ಇದೆ. ಇದರಿಂದಾಗಿ ಗಡಿಭಾಗದ ರೈತರು ಜಮೀನಿನ ಕಡೆ ಹೋಗದಂತೆ ಗ್ರಾಮಸ್ಥರು ಸೂಚನೆ ನೀಡಿದ್ದಾರೆ.