ಬೆಂಗಳೂರು: ರಾಜ್ಯದ ಹಾವೇರಿ, ಚಿಕ್ಕೋಡಿ, ಬೀದರ್, ಹಾಗೂ ಯಾದಗಿರಿ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೆರೂರು ಗ್ರಾಮದಲ್ಲಿ ಜಮೀನುಗಲು ಜಲಾವೃತವಾಗಿದ್ದು, ಚೆಂಡು ಹೂವು, ಕಬ್ಬು ಬೆಳೆ ಕೊಚ್ಚಿ ಹೋಗಿವೆ.
ಮಹಾರಾಷ್ಟ್ರದಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ಕೃಷ್ಣಾ ನದಿಗೆ ಒಳಹರಿವು ಹೆಚ್ಚಿದೆ. ಪ್ರವಾಹ ಭೀತಿ ಹೆಚ್ಚಾಗಿದೆ. ಈ ಮಧ್ಯೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಭೂಮಿ ಕಂಪಿಸಿದಂತಾಗಿ ಹಲವು ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟಿವೆ. ಮುಂದಿನ 3-4 ದಿನ ಬೆಳಗಾವಿ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಗಡಿಜಿಲ್ಲೆ ಬೀದರ್‍ನಲ್ಲಿ ನಿರಂತರ ಮಳೆಗೆ ಜಿಲ್ಲೆಯಾದ್ಯಂತ ನೂರಾರು ಎಕರೆಯಲ್ಲಿ ಬೆಳೆದಿದ್ದ ಸೋಯಾ, ತೊಗರಿ, ಹೆಸರು ಸೇರಿ ಹಲವು ಬೆಳೆಗಳು ನೀರುಪಾಲಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಬೀದರ್‍ನಲ್ಲಿ 2 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲೂ ರಕ್ಕಸ ಮಳೆಯಾಗ್ತಿದ್ದು, ಪ್ರವಾಹದ ಭೀತಿ ಉಂಟಾಗಿದೆ. ಈ ಹಿನ್ನೆಲೆ ಯಾದಗಿರಿ ಜಿಲ್ಲಾ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಕೃಷ್ಣ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಜನ, ಜಾನುವಾರುಗಳು ನದಿ ದಡಕ್ಕೆ ಹೋಗದಂತೆ ಡಂಗೂರ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಉಡುಪಿಯ ನಾವುಂದ ಗ್ರಾಮದಲ್ಲಿ ನೆರೆ – ಮನೆ ತೊರೆಯಲು ಜನರ ನಕಾರ, ಕಾಳಜಿ ಕೇಂದ್ರ ಖಾಲಿ
ಶಿವಮೊಗ್ಗ ತಾಲೂಕಿನ ಚೋರಡಿಯ ಕುಮದ್ವತಿ ನದಿಯಲ್ಲಿ ವೃದ್ಧೆಯೊಬ್ಬರು ಕೊಚ್ಚಿಕೊಂಡು ಹೋಗಿರುವ ಶಂಕೆ ಇದ್ದು ಶೋಧ ಕಾರ್ಯ ನಡೀತಿದೆ. ಚೌಡೇಶ್ವರಿ ದೇವಸ್ಥಾನಕ್ಕೆ ಪೂಜೆಗೆಂದು ತೆರಳಿದ್ದ ಕಾಣೆ ಆಗಿದ್ರು. ಇನ್ನು ಚಿಕ್ಕಮಗಳೂರಿನ ಕಳಸ ತಾಲೂಕಿನ ಹಳುವಳ್ಳಿ ಬಳಿ ರಸ್ತೆ ಬದಿ ನಿರ್ಮಿಸಿದ್ದ ತಡೆಗೋಡೆಯೂ ಕೊಚ್ಚಿ ಹೋಗಿದೆ. ಹೆಬ್ಬಾಳೆ ಸೇತುವೆ ಮುಳುಗಡೆಯಾದರೆ 8-10 ಕಿ.ಲೋ ಮೀಟರ್ ದೂರವಾದರೂ ಪರವಾಗಿಲ್ಲ ಎಂದು ಹಳುವಳ್ಳಿ ಮಾರ್ಗವನ್ನ ಜನರು ಅವಲಂಬಿಸಿದ್ದರು. ಆದ್ರೀಗ, ಆಪತ್ಭಾಂದವ ಹಳುವಳ್ಳಿ ಮಾರ್ಗದಲ್ಲೂ ತಡೆಗೋಡೆಯೇ ಕೊಚ್ಚಿ ಹೋಗಿದೆ. ಇದನ್ನೂ ಓದಿ: 2 ವಾರಗಳ ಮಳೆಗೆ ದಕ್ಷಿಣ ಕನ್ನಡ ತತ್ತರ – ಫಲ್ಗುಣಿ ಅಬ್ಬರಕ್ಕೆ ಇಡೀ ಗ್ರಾಮವೇ ಆಪೋಷನ