ಬಾಗಲಕೋಟೆ| ಈರುಳ್ಳಿ ಬೆಳೆ ನಾಶವಾಗುತ್ತಿದ್ದರೂ ಯಾವೊಬ್ಬ ಅಧಿಕಾರಿ ಬಂದಿಲ್ಲ: ರೈತರ ಬೇಸರ

Public TV
2 Min Read
heavy rain no official has come to village farmers outrage bagalkot 2

ಬಾಗಲಕೋಟೆ: ವರುಣಾರ್ಭಟಕ್ಕೆ ಬಾಗಲಕೋಟೆ (Bagalkot) ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ, ಮಳೆಯ (Rain) ಅವಾಂತರಕ್ಕೆ ತೋಟಗಾರಿಕಾ ಬೆಳೆ ಈರುಳ್ಳಿ ಅಪಾರ ಪ್ರಮಾಣದಲ್ಲಿ ನಾಶವಾಗಿರುವುದು ಜಿಲ್ಲೆಯ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ.

31,000 ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗಿರುವ ಈರುಳ್ಳಿ (Onion) ಸದ್ಯ ಮಳೆನೀರಿಗೆ ಅರ್ಧ ಕೊಚ್ಚಿ ಹೋಗಿದ್ದರೆ ಇನ್ನರ್ಧ ಹೊಲದಲ್ಲೇ ಉಳಿದು ಕೊಳೆಯುತ್ತಿದೆ.

ಅಕ್ಟೋಬರ್ 16,ರಿಂದ ಶುರುವಾಗಿರುವ ಮಳೆಗೆ ಸದ್ಯ ಪ್ರಥಮಿಕ ವರದಿಯ ಪ್ರಕಾರ ಈಗಾಗಲೇ 692 ಕೃಷಿ (Agriculture) ಬೆಳೆ ನಾಶವಾಗಿದ್ದರೆ, 131 ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಇಲ್ಲಿಯವರೆಗೆ ಸುಮಾರು 69 ಮಿಲಿ ಮೀಟರ್ ಮಳೆಯಾಗಿದೆ. ಅದರಲ್ಲಿ ಬಹುಮುಖ್ಯವಾಗಿ ಈರುಳ್ಳಿಯನ್ನೇ ನಂಬಿ ಬದುಕುವ ಅಂದ್ರೆ ಅದು ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮ. ಈ ಗ್ರಾಮದ ರೈತರ ಪರಿಸ್ಥಿತಿ ಇನ್ನೂ ಭಿನ್ನವಾಗಿದೆ. ಇದನ್ನೂ ಓದಿ: ಬಾಗಲಕೋಟೆ| ಮಳೆ ಅವಾಂತರಕ್ಕೆ ಕೊಳೆತು ಹೋಗುತ್ತಿದೆ ಈರುಳ್ಳಿ – ರೈತರ ಕಣ್ಣೀರು

heavy rain no official has come to village farmers outrage bagalkot 1

ಈ ಗ್ರಾಮದಲ್ಲಿ ಸುಮಾರು 4400 ಎಕರೆ ಪ್ರದೇಶದ ಜಮೀನುಗಳನ್ನು ಹೊಂದಿರುವ ರೈತರು, ಬಹುಪಾಲು ಈರುಳ್ಳಿಯನ್ನೇ ಪ್ರಮುಖ ಬೆಳೆಯಾಗಿ ಬೆಳೆದಿದ್ದಾರೆ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಈ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೀಡಾದ್ದಾರೆ.

ಹೊಲದಲ್ಲಿ ಬೆಳೆದ ಈರುಳ್ಳಿಗಳು ನೀರಿನ ರಭಸಕ್ಕೆ ಕೊಚ್ಚಿ ಮೋರಿಯನ್ನು ಸೇರಿದರೆ ಕಟಾವು ಮಾಡಿದ ಈರುಳ್ಳಿ ಕೊಳೆತು ಹೋಗುತ್ತಿದೆ. ಇನ್ನರ್ಧ ಈರುಳ್ಳಿಯನ್ನು ಮಳೆ ಹಾಳೆಯಿಂದ ರಕ್ಷಣೆ ಮಾಡಿ ಮಾರುಕಟ್ಟೆಗೆ ಸಾಗಿಸಬೇಕು ಅಂದರೆ ಮಳೆಯ ಅಡ್ಡಿಯಾಗಿದೆ. ಹೀಗಾಗಿ ಕಟಾವ್ ಆದ ಈರುಳ್ಳಿಯನ್ನೂ ಮಾರುಕಟ್ಟೆ ಸಾಗಿಸಲು ಆಗದೇ ರೈತರು ಪರಿತಪಿಸುವಂತಾಗಿದೆ.

ಈ ಬಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಉತ್ತಮ ಬೆಲೆ ಇದೆ, ಆದರೂ ಮಳೆಗೆ ಈರುಳ್ಳಿ ಹಾಳಾಗುತ್ತಿದೆ. ಹೀಗಾಗಿ ನಮಗೆ ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತರು.

heavy rain no official has come to village farmers outrage bagalkot 3

ಈ ಗ್ರಾಮದ ಶೇ.80ರಷ್ಟು ಬಹುಪಾಲು ರೈತರು ಈರುಳ್ಳಿಯನ್ನೇ ನಂಬಿ ಬದುಕುತ್ತಾರೆ. ಹೀಗಾಗಿ ಈ ಗ್ರಾಮಕ್ಕೆ ಈರುಳ್ಳಿ ಗ್ರಾಮ ಎಂಬ ಹೆಸರುವಾಸಿಯಾಗಿದೆ. ಕಾರಣ ಈ ಬೆಳೆ ಸುಮಾರು ನಾಲ್ಕೈದು ತಿಂಗಳಲ್ಲಿ ಬರುತ್ತದೆ. ಹಿಂಗಾರು ಅವಧಿಯಲ್ಲಿ ಎರಡನೇಯ ಬೆಳೆಯನ್ನು ನಾವು ಹಾಕಬಹುದು ಎನ್ನುವ ಕಾರಣಕ್ಕೆ ಈ ಗ್ರಾಮದ ರೈತರು ಈರುಳ್ಳಿಯನ್ನೇ ನಂಬಿ ಬದುಕುತ್ತಾ ಬಂದಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಈ ರೈತರ ಬಾಳಿಗೆ ಕೊಳ್ಳಿ ಇಟ್ಟಿದೆ. ಸಂಪೂರ್ಣವಾಗಿ ಈರುಳ್ಳಿ ಹಾಳಾಗಿರುವಂಥ ದೃಶ್ಯಗಳು ಅಲ್ಲಲ್ಲಿ ಸಹಜವಾಗಿ ಕಂಡುಬರುತ್ತಿದೆ.

ಇಷ್ಟೆಲ್ಲಾ ಅನಾಹುತವಾದರೂ ತೋಟಗಾರಿಕಾ ಇಲಾಖೆ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಭೇಟಿ ನೀಡಿಲ್ಲ ಎನ್ನುತ್ತಾರೆ ರೈತರು. ಇನ್ನು ಮಳೆ ಆವಾಂತರಕ್ಕೆ ಸಿಕ್ಕು ಹಾಳಾಗಿರುವ ಈರುಳ್ಳಿಗೆ ಸರ್ಕಾರದಿಂದ ಕೊಡುವ ಬೆಳೆ ಹಾನಿ ಪರಿಹಾರ ಯಾವುದಕ್ಕೂ ಸಾಲಲ್ಲ. ನಾವು ಎಕರೆ ಈರುಳ್ಳಿ ಬೆಳೆಯಲು 50 ಸಾವಿರದವರೆಗೆ ಖರ್ಚು ಮಾಡಿರುತ್ತೇವೆ. ಆದರೆ ಸರ್ಕಾರದವರು ಹೆಕ್ಟೆರ್‌ಗೆ ಮೂರೋ, ನಾಲ್ಕು ಸಾವಿರ ಪರಿಹಾರ ಕೊಟ್ಟು ಸುಮ್ಮನೆ ಆಗುತ್ತಾರೆ. ಹೀಗಾಗಿ ಈ ಬಾರಿ ನಮ್ಮ ಪರಿಸ್ಥಿತಿ ದೇವರಿಗೆ ಗೊತ್ತು ಅನ್ನುವಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.

 

Share This Article