ಚಾಮರಾಜನಗರ: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಅವಾಂತರವನ್ನೇ ಸೃಷ್ಟಿಸಿದೆ. ವಿಪರೀತ ಮಳೆಯಿಂದಾಗಿ ಭೂ ಕುಸಿತ ಸಂಭವಿಸುತ್ತಿದ್ದು, ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿಯೂ ಸಹ ರಸ್ತೆ ಕುಸಿದ ಪರಿಣಾಮ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
Advertisement
ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿತ ಸಂಭವಿಸಿದೆ. ಮಲೆಮಹದೇಶ್ವರ ಬೆಟ್ಟದ ಪಾಲಾರ್ ಮಾರ್ಗದಲ್ಲಿ ಮೂರು ಕಡೆ ರಸ್ತೆ ಕುಸಿತವಾಗಿದೆ. ರಸ್ತೆ ಕುಸಿತದ ಪರಿಣಾಮ ಬೆಳಗ್ಗೆಯಿಂದಲೇ ಭಾರೀ ವಾಹನಗಳು ಹಾಗೂ ಅಂತರರಾಜ್ಯ ಸಂಪರ್ಕಿಸುವ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
Advertisement
ಮಲೆ ಮಹದೇಶ್ವರ ಬೆಟ್ಟದಿಂದ ಹೋಗೆನಕಲ್ ಫಾಲ್ಸ್ ಗೆ ಸಂಪರ್ಕ ಕಲ್ಪಿಸುವ ಕೆಲ ರಸ್ತೆಗಳಲ್ಲೂ ಗುಡ್ಡ ಕುಸಿತ ಉಂಟಾಗಿದ್ದು, ಜೆಸಿಬಿಯಿಂದ ಮಣ್ಣು ತೆಗೆಯುವ ಕೆಲಸ ಆರಂಭವಾಗಿದೆ. ಹೀಗಾಗಿ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
Advertisement
Advertisement
ಮಳೆಯ ಅಬ್ಬರಕ್ಕೆ ನಾಡದೇವತೆ ಚಾಮುಂಡಿ ದರ್ಶನಕ್ಕೆ ಹೋಗುವ ಚಾಮುಂಡಿ ಬೆಟ್ಟದಲ್ಲೂ ಭೂ ಕುಸಿತವಾಗಿದೆ. ಚಾಮುಂಡಿ ಬೆಟ್ಟದ ವ್ಯೂವ್ ಪಾಯಿಂಟ್ ಬಳಿಯಲ್ಲಿ ಭೂಮಿ ಕುಸಿದಿದ್ದರಿಂದ ರಸ್ತೆಯೂ ಕುಸಿತವಾಗಿದೆ. ನಂದಿ ವಿಗ್ರಹದ ಕಡೆಗೆ ಸಾಗುವ ಮಾರ್ಗದ ಸನಿಹದಲ್ಲಿಯೇ ಈ ವ್ಯೂವ್ ಪಾಯಿಂಟ್ ಇದೆ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದಾರೆ.
ಇತ್ತ ಮಳೆಯಬ್ಬರಕ್ಕೆ ಗೋಕಾಕ್ ಫಾಲ್ಸ್ ಬಳಿ ಇರುವ ಗುಡ್ಡ ಮತ್ತೆ ಕುಸಿಯುತ್ತಿದ್ದು, ರಸ್ತೆಗೆ ಬೃಹತ್ ಗಾತ್ರದ ಕಲ್ಲುಗಳು ಉರುಳಿ ಬಿದ್ದಿವೆ. ಬೆಳಗಾವಿ-ಗೋಕಾಕ್ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸವಾರರು ಆತಂಕದಲ್ಲೇ ಓಡಾಡುತ್ತಿದ್ದಾರೆ. ಉರುಳಿ ಬಿದ್ದಿರುವ ಬಂಡೆಗಲ್ಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಬೆಳಗ್ಗೆ 7 ಗಂಟೆಯಿಂದ ಮತ್ತೆ ಆರಂಭವಾಗಿದೆ. ಉರುಳಿರುವ ಎರಡು ಬೃಹತ್ ಬಂಡೆಗಳನ್ನು ಮೊದಲು ಬ್ಲಾಸ್ಟ್ ಮಾಡಿ ಅವುಗಳನ್ನು ಅಲ್ಲಿಂದ ಸಾಗಿಸಲಾಗುತ್ತದೆ.