ಬೆಂಗಳೂರು: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಎಲ್ಲಾ ಕಡೆ ಉತ್ತಮ ಮಳೆ ಆಗ್ತಿದ್ದು, ಅವಾಂತರಗಳು ಮುಂದುವರಿದಿವೆ. ಆಗುಂಬೆಯಲ್ಲಿ ನಿನ್ನೆ 230 ಮಿಲಿಮೀಟರ್ ಮಳೆ ಆಗಿದ್ದು, ಪ್ರಸಕ್ತ ಮುಂಗಾರಿನಲ್ಲಿ ಆಗುಂಬೆಯಲ್ಲಿ ಬಿದ್ದ ಮಳೆಯ ಪ್ರಮಾಣ 5000 ಮಿಲಿಮೀಟರ್ ದಾಟಿದೆ.
Advertisement
ಪಶ್ಚಿಮ ಘಟ್ಟಗಳಲ್ಲಿ ಮಳೆ ಅವಾಂತರ ಮುಂದುವರಿದಿದೆ. ಕುದುರೆಮುಖ ಭಾಗದಲ್ಲಿ ಭಾರೀ ಮಳೆ ಆಗ್ತಿದ್ದು, ಭದ್ರಾ ನದಿ ಹರಿವಿನಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಹೊರನಾಡು-ಕಳಸ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿದೆ. ಹೀಗಾಗಿ ಪರ್ಯಾಯ ಮಾರ್ಗ ಹಳುವಳ್ಳಿ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ.
Advertisement
Advertisement
ದಕ್ಷಿಣ ಕನ್ನಡದ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದೆ. ನೇತ್ರಾವತಿ ನದಿ ನೀರಿನ ಮಟ್ಟ 6.5 ಮೀಟರ್ ತಲುಪಿದೆ. 8 ಮೀಟರ್ ತಲುಪಿದರೆ ಅಪಾಯ ಎದುರಾಗಲಿದೆ. ಹಳೆ ಮೈಸೂರು ಭಾಗದಲ್ಲಿ ಸಣ್ಣಪುಟ್ಟ ನದಿಗಳು ಕೂಡ ಉಕ್ಕೇರುತ್ತಿವೆ. ಚಾಮರಾಜನಗರದ ಸುವರ್ಣಾವತಿ, ಚಿಕ್ಕಹೊಳೆ ಜೋಡಿ ಜಲಾಶಯಗಳು ತುಂಬಿ ಹರಿಯುತ್ತಿವೆ. ಸುವರ್ಣವತಿ ನದಿಯ ಹಿಂದಿನ ಪ್ರವಾಹ ಮಟ್ಟಕ್ಕಿಂತ 1.2 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ.
Advertisement
ಕೊಳ್ಳೆಗಾಲದ ಜನ ಹಿಂದೆಂದೂ ಇಂತಹ ಸ್ಥಿತಿಯನ್ನು ಕಂಡೇ ಇಲ್ಲ ಎನ್ನುತ್ತಿದ್ದಾರೆ. ಅಪಾರ ಕಬ್ಬು, ಬಾಳೆ, ತೆಂಗು, ಅಡಿಕೆ ತೋಟ ಜಲಾವೃತವಾಗಿದೆ. ಮಂಡ್ಯ ಜಿಲ್ಲೆಯ ಶಿಂಷಾವತಿ ನದಿ ಅಬ್ಬರ ಮುಂದುವರಿದಿದೆ. ಹಲಗೂರಿನ ಟಿಕೆ ಹಳ್ಳಿ ಬಳಿ ಶಿಂಷಾ ಅಪಾಯದ ಮಟ್ಟ ಮೀರಿದೆ. ಶಿಂಷಾ ನದಿ ಕಾವೇರಿಗೆ ಕನಿಷ್ಠ ಅಂದ್ರೂ 50ಸಾವಿರ ಕ್ಯೂಸೆಕ್ ನೀರನ್ನು ಸೇರಿಸ್ತಾ ಇದೆ. ಬೆಂಗಳೂರು-ಮೈಸೂರು ಹೈವೇಯಲ್ಲಿ ತೆರಳುವ ಮಂದಿ ಒಂದು ಕ್ಷಣ ನಿಂತು ಶಿಂಷಾ ವೈಭವವನ್ನು ಕಣ್ತುಂಬಿಕೊಳ್ತಿದ್ದಾರೆ. ಕೊರಟಗೆರೆ ತಾಲೂಕಿನ ತೀತಾ ಡ್ಯಾಂ ಭರ್ತಿಯಾಗಿದೆ. ಜಯಮಂಗಲಿ ನದಿಯ ನೀರು ಪ್ರವಾಹದ ರೀತಿಯಲ್ಲಿ ಡ್ಯಾಂಗೆ ಸೇರುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.
ಹಾವೇರಿಯ ರಾಣೆಬೆನ್ನೂರು, ರಟ್ಟೀಹಳ್ಳಿ ಸೇರಿ ಹಲವೆಡೆ ಬೆಳೆ ಹಾನಿ. ಮೆಕ್ಕೆಜೋಳ ಬೆಳೆ ಕೆಂಪು ಬಣ್ಣಕ್ಕೆ ತಿರುಗಿ ಕೊಳೆತು ಹಾಳಾಗುತ್ತಿದೆ. ಅನ್ನದಾತ ಕಂಗಾಲಾಗಿದ್ದಾನೆ. ದಾವಣಗೆರೆಯ ಚನ್ನಗಿರಿಯಲ್ಲಿ ಕೆರೆ ಕಟ್ಟೆ ಒಡೆದಿದೆ. ಹರಿದ್ರಾವತಿ ನದಿ ತುಂಬಿ ಹರಿಯುತ್ತಿದೆ. ಹತ್ತಾರು ಹಳ್ಳಿಗಳ ಸಂಪರ್ಕವೇ ಕಟ್ ಆಗಿದೆ. ಗದಗ ಜಿಲ್ಲೆಯ ಹಲವೆಡೆ ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ, ಮಾವು, ಕಬ್ಬು ಹೀಗೆ ಅನೇಕ ಬೆಳೆಗಳು ನಾಶವಾಗಿವೆ. ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆಗೆ ವೋಟಿಂಗ್ – NDA ಅಭ್ಯರ್ಥಿ ಜಗದೀಪ್ ಧನ್ಕರ್ ಆಯ್ಕೆ ಖಚಿತ
ಹಾಸನದಲ್ಲಿ ಹಲವೆಡೆ ಕೆರೆಗಳು ಕೋಡಿ ಬಿದ್ದು ಜಮೀನುಗಳಿಗೆ ನೀರು ನುಗ್ಗಿದೆ. ರೈತರು ಕಂಗಾಲಾಗಿದ್ದಾರೆ. ಕೋಲಾರದ ಹಲವೆಡೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮ್ಯಾಟೊ, ರಾಗಿ, ಭತ್ತ, ಮೂಲಂಗಿ ಸೇರಿದಂತೆ ಹಲವು ಬೆಳೆಗಳು ಜಲಾವೃತಗೊಂಡಿವೆ. ಇತ್ತ ಕೊಡಗು ಜಿಲ್ಲೆಯಲ್ಲಿ ಜಲಸ್ಫೋಟ ಬೆನ್ನಲ್ಲೇ ಇದೀಗ ಮತ್ತೆ ಭೂಕುಸಿತದ ಆತಂಕ ಮನೆಮಾಡಿದೆ. ಈ ಹಿಂದಷ್ಟೇ ಮಡಿಕೇರಿ ತಾಲೂಕಿನ ಚೆಂಬು, ಕರಿಕೆ ಸಂಪಾಜೆ ವ್ಯಾಪ್ತಿಯಲ್ಲಿ ಹಾಗೂ ಗಡಿಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲುಗುಂಡಿ, ಗೂನಡ್ಕ ಭಾಗದಲ್ಲೂ ಸರಣಿ ಭೂಕಂಪನ ಅಗಿತ್ತು. ಅಷ್ಟೇ ಅಲ್ಲದೇ ವಿಚಿತ್ರ ಶಬ್ಧ ಕೇಳಿರುವುದಾಗಿ ಅಲ್ಲಿನ ಜನ ಹೇಳಿದ್ರು.
ಇದೀಗ ಭೂಕಂಪ ಅಗಿರುವ ಸ್ಥಳಗಳಲ್ಲೇ ಮಳೆ ಅವಾಂತರಗಳು ಮುಂದುವರಿದಿದೆ. ಅದರಲ್ಲೂ ಪಯಸ್ವಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 2018ರ ರೀತಿಯಲ್ಲೇ ಮತ್ತೆ ಗಂಡಾಂತರ ಎದುರಾಗುತ್ತಾ ಅನ್ನೋ ಆತಂಕ ಮನೆ ಮಾಡಿದೆ. ಈವರೆಗೂ ಕೊಡಗು ಜಿಲ್ಲೆಯಲ್ಲಿ 265 ಮನೆಗಳಿಗೆ ಹಾನಿಯಾಗಿದೆ. 1174 ಕಿಲೋ ಮೀಟರ್ ರಸ್ತೆಗೆ ಹಾನಿಯಾಗಿದೆ.