ಬೆಂಗಳೂರು: ಬಿಟ್ಟುಬಿಡದೇ ಸುರಿಯುತ್ತಿರುವ ಶತಮಾನದ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಶುಕ್ರವಾರ ರಾತ್ರಿಯಿಡಿ ಸುರಿದ ಭಾರೀ ಮಳೆಯಿಂದ ಐಟಿ ಸಿಟಿ ಈಗ ಗುಂಡಿ ಸಿಟಿಯಾಗಿದೆ. ಬೆಂಗಳೂರು ಅಲ್ಲದೇ ರಾಜ್ಯದ ಹಲವಡೆ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಜಿಲ್ಲೆಗಳಲ್ಲಿ ಮಳೆ ಹೇಗಿದೆ ಎನ್ನುವ ಮಾಹಿತಿ ಈ ವರದಿಯಲ್ಲಿದೆ.
ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಶುಕ್ರವಾರ ಇಡೀ ಜಿಲ್ಲೆಯಲ್ಲಿ ಕೇವಲ 0.2ಮಿ.ಮೀ. ಮಳೆ ಆಗಿದೆ. ಭದ್ರಾ ಅಣೆಕಟ್ಟೆ ಜಲಾನಯನ ವ್ಯಾಪ್ತಿಯಲ್ಲಿ ಮಳೆ ಕೊರತೆ ಇರುವ ಕಾರಣ ಮೋಡ ಭಿತ್ತನೆಗೆ ಭದ್ರಾ ಅಭಿವೃದ್ಧಿ ಪ್ರಾಧಿಕಾರ ಸರ್ಕಾರವನ್ನು ಕೋರಿದೆ.
Advertisement
ಕಲಬುರಗಿ: ಈ ವರ್ಷವು ಸಹ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆದರೆ ಕಳೆದ 15 ದಿನಗಳಿಂದ ಸುರಿದ ಮಳೆಯಿಂದ ತೊಗರಿ ಬೆಳೆ ನಾಶವಾಗುತ್ತಿದೆ.
Advertisement
ಧಾರವಾಡ: ಜಿಲ್ಲೆಯಲ್ಲಿ ಸಂಜೆ ಹೊತ್ತಿಗೆ ಮಳೆ ಆರಂಭವಾಗುತ್ತಿದೆ. ಸಂಜೆ ಧಾರಾಕಾರವಾಗಿ ಸುರಿಯುವ ಮಳೆ ರಾತ್ರಿ ಸ್ವಲ್ಪ ಜಿಟಿಜಿಟಿಯಾಗಿ ಬರುತ್ತಿದೆ. ಹತ್ತಿ ಬೆಳೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. ಉಳಿದಂತೆ ಕೆರೆಗಳು, ಬೆಣ್ಣಿಹಳ್ಳ, ತುಪ್ರಿ ಹಳ್ಲ ತುಂಬಿ ಹರಿಯುತ್ತಿವೆ. ಕೆಲ ಗ್ರಾಮಗಳಲ್ಲಿ ಮಳೆಯಿಂದ ನೀರು ನುಗ್ಗಿದ್ದು ರಸ್ತೆಗಳಿಗೆ ಹಾನಿಯಾಗಿದೆ.
Advertisement
Advertisement
ಯಾದಗಿರಿ: ಜಿಲ್ಲೆಯಲ್ಲಿ ಈ ತಿಂಗಳು ವಾಡಿಕೆ ಮಳೆಗಿಂತ ಶೇ.43 ಹೆಚ್ಚಾಗಿದೆ. ಜೀವ ನದಿಗಳಾದ ಭೀಮಾ, ಕೃಷ್ಣಾ ನದಿಗಳು ಮೈದುಂಬಿ ಹರಿಯುತ್ತಿದೆ. ಬಸವಸಾಗರ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಮಳೆಗೆ ಹತ್ತಿ, ಭತ್ತ ಹಾಗೂ ತೂಗರಿ ಬೆಳೆ ಹಾನಿಯಾಗಿದೆ.
ಹಾವೇರಿ: ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿದೆ. ಜಿಲ್ಲೆಯ ತುಂಗಾಭದ್ರ, ವರದಾ ನದಿ ಸೇರಿದಂತೆ ಕೆರೆಗಳು ತುಂಬುತ್ತಿವೆ. ಜಿಲ್ಲೆಯಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ಮೆಕ್ಕೆಜೋಳ ಮತ್ತು ಹತ್ತಿ ಬೆಳೆ ವಿವಿಧ ರೋಗ ಬಂದಿದ್ದು ಬೆಳೆ ನಷ್ಟವಾಗುತ್ತಿವೆ.
ಕೊಪ್ಪಳ: ಹಳ್ಳದ ನೀರು ಹೊಲಕ್ಕೆ ನುಗ್ಗಿ ಅಂದಾಜು 5 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಈರುಳ್ಳಿ, ಮತ್ತಿತರ ಬೆಳೆ ಚಿಕ್ಕಸಿಂದೋಗಿ, ಹಿರೇಸಿಂದೋಗಿಯಲ್ಲಿ ಜಲಾವೃತವಾಗಿ ಭಾರಿ ನಷ್ಟವಾಗಿದೆ. ಇನ್ನೊಂದೆಡೆ ಕೊಪ್ಪಳದ ಗಣೇಶನಗರದಲ್ಲಿ ಮನೆಗಳು ಜಲಾವೃತವಾಗಿದ್ದು, ರೈಲು ನಿಲ್ದಾಣದ ಬಳಿಯ ಹುಲಿಗಿ ಆಚಾರ್ಯ ಎಂಬವರ ಮನೆ ಮೇಲ್ಛಾವಣೆ ಕುಸಿದುಬಿದ್ದಿದೆ. ಜಿಲ್ಲೆಯ ಹೇಮಗುಡ್ಡ, ಮುಕ್ಕುಂಪಿ ಕೆರೆ ಸೇರಿದಂತೆ ಬಹುತೇಕ ಕೆರೆಕಟ್ಟೆಗಳು ತುಂಬಿದೆ. ಕಿರು ಜಲಪಾತಗಳು ಸೃಷ್ಟಿಯಾಗುತ್ತಿವೆ.
ರಾಯಚೂರು: ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಕಳೆದ ಮೂರು ವರ್ಷಗಳಿಂದ ಬರಗಾಲ ಅನುಭವಿಸಿದ್ದ ರೈತರು ಈಗ ಮಳೆಯಿಂದ ತತ್ತರಿಸಿದ್ದಾರೆ. ಬಹುತೇಕ ಹಳ್ಳಗಳು ತುಂಬಿ ರಸ್ತೆ ಸಂಪರ್ಕ ಕಡಿತಗೊಂಡಿವೆ. ಹೊಲಗದ್ದೆಗಳಿಗೆ ನೀರು ನುಗ್ಗಿ ನೂರಾರು ಕೋಟಿ ರೂಪಾಯಿ ಬೆಳೆ ಹಾನಿಯಾಗಿದೆ.
ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಾಂತ ಈ ಭಾರೀ ಉತ್ತಮ ಮಳೆಯಾಗಿದೆ. ಜಿಲ್ಲೆಯಾದ್ಯಾಂತ ಹಳ್ಳ-ಕೊಳ್ಳಗಳು ತುಂಬಿದರೆ, ಕೆರೆಗಳು ಕೋಡಿ ಹರಿದಿದ್ದು ನದಿ ಪಾತ್ರಗಳು ಮರು ಜೀವ ಪಡೆದುಕೊಂಡಿವೆ. ಜಿಲ್ಲೆಯ ಕುಡಿಯುವ ನೀರಿನ ಮೂಲಗಳಾದ ಜಲಾಶಯಗಳು ಕೆರೆಗಳು ತುಂಬಿ ಕುಡಿಯುವ ನೀರಿನ ಅಭಾವ ನೀಗುವುದರ ಜೊತೆಗೆ ಅಂತರ್ಜಲದ ಅಭಿವೃದ್ಧಿ ಆಗಿದೆ. ಸತತ 7 ವರ್ಷಗಳಿಂದ ಬರಪೀಡಿತ ಜಿಲ್ಲೆಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಈ ಬರದ ಶಾಪದಿಂದ ವಿಮೋಚನೆ ಸಿಕ್ಕಿದೆ.
ಮಂಡ್ಯ: ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ಉತ್ತಮ ಮಳೆಯಾಗುತ್ತಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಅಲ್ಲಲ್ಲಿ ಕೆಲ ಊರುಗಳಲ್ಲಿ ಮಳೆಯಾಗಿದೆ. ಆದ್ರೆ ಮಂಡ್ಯ ನಗರ ಸೇರಿದಂತೆ ಹಲವೆಡೆ ನಾಲ್ಕು ದಿನಗಳಿಂದ ಮಳೆಯಾಗಿಲ್ಲ.
ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ರಾತ್ರಿ ಮೂರು ಗಂಟೆಗಳ ಕಾಲ ಮಳೆಯಾಗಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರ. ಸಂಡೂರು. ಹಗರಿಬೊಮ್ಮನಹಳ್ಳಿ ಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಕೆಲವಡೆ ಹಳೆಯ ಮನೆಗಳ ಗೋಡೆ ಕುಸಿದಿವೆ. ಯಾವೂದೇ ಪ್ರಾಣ ಹಾನಿ ಸಂಭವಿಸಿಲ್ಲ ಜಲಾಶಯ ತುಂಬಲು 5 ಅಡಿ ಮಾತ್ರ ಬಾಕಿ ಇದೆ.
ಚಾಮರಾಜನಗರ: ಕಳೆದ 6 ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿದ್ದ ಚಾಮರಾಜನಗರದಲ್ಲಿ ಕಳೆದ ಎರಡು ತಿಂಗಳಿಂದ ಉತ್ತಮ ಮಳೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ 10 ವರ್ಷಗಳಿಂದ ತುಂಬದ ಜಲಾಶಯಗಳು ಹಾಗೂ ಕೆರೆ ಕಟ್ಟೆಗಳು ಭರ್ತಿಯಾಗಿವೆ.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡದಲ್ಲಿ ಮಳೆ ಕಡಿಮೆಯಾಗಿದ್ದು, ಕೆಲವೊಮ್ಮೆ ಚದುರಿದಂತೆ ಮಳೆಯಾಗುತ್ತಿದೆ.
ಚಿಕ್ಕಬಳ್ಳಾಪುರ ಮಳೆಯ ದೃಶ್ಯಗಳು:
ಬಳ್ಳಾರಿ ಮಳೆಯ ದೃಶ್ಯಗಳು:
ಹಾವೇರಿ ಮಳೆಯ ದೃಶ್ಯಗಳು:
ಧಾರವಾಡ ಮಳೆಯ ದೃಶ್ಯಗಳು:
ರಾಯಚೂರು ಮಳೆಯ ದೃಶ್ಯಗಳು: