– ಮನೆಗಳ ಬಿದ್ದ ಮರ, ಬೈಕ್-ಕಾರು ಜಖಂ
ಶಿವಮೊಗ್ಗ/ಬೆಳಗಾವಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಇತ್ತ ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ಶಿವಮೊಗ್ಗದಲ್ಲಿ ಇಂದು ಸಂಜೆ ಅರ್ಧ ಗಂಟೆಗಳ ಕಾಲ ಭರ್ಜರಿ ಮಳೆಯಾಗಿದ್ದು, ಮಳೆಗೆ ಹಲವು ಅವಾಂತರ ಸಹ ಸೃಷ್ಟಿಯಾಗಿದೆ. ನಗರದ ಹಲವೆಡೆ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬ ಮರಗಳು ಉರುಳಿ ಬಿದ್ದಿದ್ರೆ, ಕೆಲವು ಮನೆ ಮೇಲೂ ಮರಗಳು ಉರುಳಿ ಬಿದ್ದಿದೆ. ಅಲ್ಲದೇ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಕಾರಿನ ಮೇಲೆ ಸಹ ಮರಗಳು ಉರುಳಿ ಬಿದ್ದಿದ್ದು, ಪರಿಣಾಮ ಬೈಕ್ ಹಾಗೂ ಕಾರು ಸಂಪೂರ್ಣ ಜಖಂಗೊಂಡಿವೆ.
Advertisement
Advertisement
ನಗರದ ಹೊಸಮನೆ ಹಾಗೂ ವೆಂಕಟೇಶ್ ನಗರ ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಮನೆಗೆ ನುಗ್ಗಿದ್ದ ನೀರನ್ನು ಹೊರ ಹಾಕುವಲ್ಲಿ ನಿರತರಾಗಿದ್ದರು. ಅಲ್ಲದೇ ಮಳೆ ನಿಂತ ಮೇಲೆ ಮಹಾನಗರ ಪಾಲಿಕೆ ಸಿಬ್ಬಂದಿ, ಅರಣ್ಯ ಸಿಬ್ಬಂದಿ ಹಾಗೂ ಕೆಇಬಿ ಸಿಬ್ಬಂದಿ ರಸ್ತೆಗೆ ಉರುಳಿ ಬಿದ್ದಿದ್ದ ಮರಗಳು ಮತ್ತು ವಿದ್ಯುತ್ ಕಂಬ ತೆರವುಗೊಳಿಸುವ ಕಾರ್ಯ ನಡೆಸಿದರು.
Advertisement
ಬಿಸಿಲಿನ ಬೇಗೆಗೆ ತತ್ತರಿಸಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದೆ. ಹುಕ್ಕೇರಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ಮಳೆರಾಯ ತಂಪೆರೆದಿದ್ದಾನೆ. ಮಳೆಯಿಂದ ರೈತರಲ್ಲಿ ಸಂತಸ ಮೂಡಿದ್ದು, ಮುಂಗಾರು ಬಿತ್ತನೆಗೆ ರೈತರು ಸಿದ್ಧತೆ ಆರಂಭಿಸಿದ್ದಾರೆ.