ಬೆಂಗಳೂರು: ರಾಜ್ಯಾದಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಬಾಗಲಕೋಟೆ, ಬೀದರ್, ರಾಯಚೂರು, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ವರುಣನ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
Advertisement
ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಸತತ ಒಂದು ಗಂಟೆ ಸುರಿದ ಮಳೆಗೆ ರಸ್ತೆಗಳಿಗೆ ನೀರು ನುಗ್ಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು ವಾಹನ ಸವಾರರು ಪರದಾಡಿದ್ದಾರೆ. ಜಿಲ್ಲೆಯ ಹಲವು ಕೆರೆ ಕಟ್ಟೆ ಹಳ್ಳಗಳು ಭರ್ತಿಯಾಗಿವೆ. ಅಲ್ಲದೇ ಹಲವು ಗ್ರಾಮಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ರಸ್ತೆಗಳು ಹಳ್ಳಗಳಂತಾಗಿವೆ. ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಚೆಕ್ ಡ್ಯಾಂ ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಬೇಡರೆಡ್ಡಿ, ಭರಮಸಾಗರ ಸೇರಿದಂತೆ ಐಮಂಗಲ, ವದ್ದಿಕೆರೆ ಗ್ರಾಮಗಳಲ್ಲೂ ಭಾರೀ ಮಳೆಯಾಗಿ ಆ ಭಾಗದ ಎಲ್ಲಾ ಕೆರೆಗಳು ಭರ್ತಿಯಾಗಿವೆ. ಅಲ್ಲದೇ ಘಟಪರ್ತಿ ಹೊನ್ನೂರು ಭರಮಸಾಗರದ ಅಡಿಕೆ-ತೆಂಗಿನ ತೋಟಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಹೊನ್ನೂರು ಘಟಪರ್ತಿ ಗ್ರಾಮಗಳ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಅಗಿದ್ದರೂ ಬಹಳ ವರ್ಷಗಳ ನಂತರ ಭರ್ಜರಿಯಾಗಿ ಮಳೆ ಸುರಿಯುತ್ತಿರೋದರಿಂದ ಜನರು ಹರ್ಷಿತರಾಗಿದ್ದಾರೆ.
Advertisement
Advertisement
ಬಾಗಲಕೋಟೆಯ ಮೈಗೂರಿನಲ್ಲಿ ಪೀಡಶೆಟ್ಟಿ ಎಂಬವರ ಮನೆ ಗೋಡೆ ಕುಸಿದು ಮನೆಯಲಿದ್ದ ಮೀನಾಕ್ಷಿ ಎಂಬವರಿಗೆ ಗಾಯವಾಗಿದೆ. ಅಬ್ಬರದ ಮಳೆಗೆ ನಗರದ ಜಮಖಂಡಿ ಬಸ್ ನಿಲ್ದಾಣ, ಹನುಮಾನ್ ಚೌಕ ಜಲಾವೃತಗೊಂಡಿವೆ.
Advertisement
ಬೆಳಗಾವಿಯ ಗೋಕಾಕ್‍ನಲ್ಲಿ ಮಳೆರಾಯ ಅಬ್ಬರಿಸಿದ್ದು, ಸತತ 2 ಗಂಟೆಗಳ ಕಾಲ ಸುರಿದ ಮಳೆಗೆ ಕೆರೆ-ಕಟ್ಟೆ ಒಡೆದು 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಮನೆಗೆ ನುಗ್ಗಿದ್ದರಿಂದ ಸಂಗ್ರಹಿಸಿಟ್ಟಿದ್ದ ದವಸ-ಧಾನ್ಯ ಸಂಪೂರ್ಣ ಹಾಳಾಗಿದೆ.
ಬೆಣ್ಣೆ ನಗರಿ ದಾವಣಗೆರೆಯ ಹರಿಹರ, ಹೊನ್ನಾಳಿ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದ್ದು ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
ತುಮಕೂರಿನಲ್ಲಿ ಕೊರಟಗೆರೆ, ಮಧುಗಿರಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಕೊರಟಗೆರೆಯ ಕಾಳಿದಾಸ ನಗರ ಸಂಪೂರ್ಣ ಜಲಾವೃತವಾಗಿದ್ದು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನುಗ್ಗಿರುವ ನೀರು ಹೊರಹಾಕಲು ಜನ ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಜಿಲ್ಲೆಯ ವಿವಿಧೆಡೆ ವಿದ್ಯುತ್ ಸ್ಥಗಿತವಾಗಿದ್ದು, ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
ಬಳ್ಳಾರಿಯಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ನಗರದ ಎಂಪಿಎಂಸಿಯ ಲಾರಿ ಟರ್ಮಿನಲ್ ಬಳಿಯ ಮನೆಯೊಂದು ಕುಸಿದು ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಮಾರಕ್ಕ ಮತ್ತು ಆಕೆಯ ಮಗು ನಾಗರಾಜ ಎಂದು ಗುರುತಿಸಲಾಗಿದೆ. ಇನ್ನೂ ಗುಗ್ಗರಹಟ್ಟಿ ಬಳಿಯ ತಗ್ಗು ಪ್ರದೇಶಗಳ ಮನೆಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿದೆ. ಹೀಗಾಗಿ ಜನರು ಮನೆಗೆ ನುಗ್ಗಿರುವ ನೀರನ್ನು ಹೊರಹಾಕುವಲ್ಲಿ ನಿರತರಾಗಿದ್ದಾರೆ. ಪಾಲಿಕೆ ಆಯುಕ್ತರು ಮುಂಜಾನೆಯಿಂದಲೇ ನಗರ ಸಂಚಾರ ಆರಂಭಿಸಿದ್ದು, ತಗ್ಗು ಪ್ರದೇಶದ ಜನರಿಗೆ ಸಹಾಯ ಮಾಡುವಲ್ಲಿ ನಿರಾತರಾಗಿದ್ದಾರೆ.
ಇನ್ನು ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.