ರಾಯಚೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ (Heavy Rain) ಹಿನ್ನೆಲೆ ನವರಂಗ್ ದರ್ವಾಜ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದಿದ್ದು, ಪಕ್ಕದ ಕಟ್ಟಡದ ಮೇಲೆ ವಾಲಿ ಭಾರೀ ದುರಂತವೊಂದು ತಪ್ಪಿದೆ.
ಸಿವಿಲ್ ಎಂಜಿನಿಯರ್ ಮಹ್ಮದ್ ದಸ್ತಗೀರ್ ಎಂಬುವವರ ಕಟ್ಟಡ ಮಹ್ಮದ್ ಸಿರಾಜ್ ಎಂಬುವವರ ಮನೆಯ ಮೇಲೆ ವಾಲಿದೆ. ಸತತ ಮಳೆ ಹಾಗೂ ಚರಂಡಿ ನೀರಿನಿಂದ ಕಟ್ಟಡದ ಬುನಾದಿ ಕುಸಿದಿದೆ ಎನ್ನಲಾಗಿದ್ದು, ಕಟ್ಟಡದ ಎಡಭಾಗ ಕುಸಿದು ಪಕ್ಕದ ಮನೆಯ ಮೇಲೆ ವಾಲಿದೆ. ಒಂದು ವೇಳೆ ಬಲಭಾಗದ ಕಡೆ ಮನೆ ವಾಲಿದ್ದರೆ ಭಾರೀ ದುರಂತವೇ ಸಂಭವಿಸುತ್ತಿತ್ತು.ಇದನ್ನೂ ಓದಿ: ಟೇಕಾಫ್ ಆದ ಕೆಲಹೊತ್ತಲ್ಲೇ ಅಮೆರಿಕ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ
ಸುಮಾರು 14 ವರ್ಷಗಳ ಹಿಂದೆ 22*24 ವಿಸ್ತೀರ್ಣದಲ್ಲಿ ಕಟ್ಟಿರುವ ನಾಲ್ಕು ಅಂತಸ್ತಿನ ಕಟ್ಟಡ ಇದಾಗಿದ್ದು, ಬೀಳುವ ಹಂತಕ್ಕೆ ತಲುಪಿದೆ. ಬಾಡಿಗೆ ನೀಡಲು ಪುಟ್ಟ ಜಾಗದಲ್ಲಿ ನಾಲ್ಕು ಅಂತಸ್ತು ಕಟ್ಟಡ ನಿರ್ಮಾಣ ಮಾಡಲಾಗಿದ್ದು, ರಸ್ತೆ ಪಕ್ಕದಲ್ಲೇ ಇರುವುದರಿಂದ ಸಾರ್ವಜನಿಕರು ಆತಂಕದಲ್ಲಿದ್ದಾರೆ.
ಸದ್ಯ ಸ್ಥಳಕ್ಕೆ ಮಹಾನಗರ ಪಾಲಿಕೆ ಪ್ರಭಾರಿ ಅಧ್ಯಕ್ಷ ಸಾಜಿದ್ ಸಮೀರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಕೂಡಲೇ ತೆರವು ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದು, ಕಟ್ಟಡದ ಮಾಲೀಕ ಸ್ವಯಂ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಕಟ್ಟಡಕ್ಕೆ ಮೂರು ಕಬ್ಬಿಣದ ಪಿಲ್ಲರ್ ಅಳವಡಿಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಆಗಿನ ನಗರಸಭೆ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಹೇಗೆ ಅನುಮತಿ ನೀಡಿದ್ದರು ಎನ್ನುವ ಅನುಮಾನ ಮೂಡಿಸಿದೆ.ಇದನ್ನೂ ಓದಿ: ಇನ್ಸ್ಟಾಗ್ರಾಂ ಲವ್, ಸೆಕ್ಸ್, ದೋಖಾ ಆರೋಪ – ಡೆತ್‌ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ