Bengaluru CityHaveriKalaburagiKarnatakaLatestMain PostMandyaMonsoonUdupiUttara KannadaVijayapura

ರಾಜ್ಯದ ವಿವಿಧೆಡೆ ಭಾರೀ ಮಳೆ- ಬೆಳೆಗಳು ನಾಶ, ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳಗಳು

– ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳ ಪರದಾಟ

ಬೆಂಗಳೂರು: ರಾಜ್ಯದ ಹಲವೆಡೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲದೆ ಹಲವು ಬೆಳೆಗಳು ನಾಶವಾಗಿ, ರೈತರು ಪರದಾಡುವಂತಾಗಿದೆ. ಇನ್ನೊಂದೆಡೆ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡಿದ್ದಾರೆ.

ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಧಾರಕಾರ ಮಳೆಯಾಗಿದೆ. ಅಲ್ಲದೆ ಇಂದು ಹಗಲು ಸಹ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಹಳ್ಳ ಕೊಳ್ಳಗಳು ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ಹಳ್ಳ ದಾಟಲು ಜೀವದ ಹಂಗು ತೊರೆದು ಬೈಕ್ ಸವಾರರು ಸರ್ಕಸ್ ನಡೆಸಿದ್ದಾರೆ. ಅಲ್ಲದೆ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳ ಪರದಾಡಿದ್ದಾರೆ. ಮತ್ತೊಂದೆಡೆ ನಿರಂತರ ಮಳೆಯಿಂದ ಜಮೀನುಗಳು ಕೆರೆಯಂತಾಗಿದ್ದು, ತೊಗರಿ, ಹತ್ತಿ, ಸೂರ್ಯಕಾಂತಿ ಸೇರಿದಂತೆ ಬಹುತೇಕ ಬೆಳೆಗಳು ನಾಶವಾಗಿವೆ. ಬೆಳೆ ನಾಶದಿಂದ ಅನ್ನದಾತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಇಂದು ಮುಂಜಾನೆ ಅಲ್ಪ ಮಳೆಯಾಗಿದ್ದು, ಮಧ್ಯಾಹ್ನದ ನಂತರ ಜಿಲ್ಲೆಯ ಬಹುತೇಕ ಭಾಗದಲ್ಲಿ ವರುಣ ಅಬ್ಬರಿಸಿದ್ದಾನೆ. ಜಿಲ್ಲೆಯಾಧ್ಯಾಂತ ಕಳೆದ 24 ಘಂಟೆಯಲ್ಲಿ 73.0 ಮಿ.ಮೀ. ಮಳೆಯಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರೆದಿದೆ. ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಭಾರತ ಕೋವಿಡ್ 19 ನಿರ್ವಹಣೆ ಮಾಡಿದಂತೆ ಬೇರೆ ಯಾವ ದೇಶ ಮಾಡಿಲ್ಲ – ಸುಪ್ರೀಂ ಮೆಚ್ಚುಗೆ

ಹಾವೇರಿ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಮೋಡ ಮುಸುಕಿದ ವಾತಾವರಣ ನಿರ್ಮಾವಾಗಿದ್ದು, ಸಂಜೆಯಾಗುತ್ತಿದ್ದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಹಾವೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಅನ್ನದಾತರ ಶೇಂಗಾ, ಸೋಯಾಬೀನ್ ಫಸಲು ಹಾಗೂ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗುವ ಆತಂಕವನ್ನ ಮಳೆರಾಯ ಸೃಷ್ಟಿ ಮಾಡಿದ್ದಾನೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ದಿಢೀರ್ ಮಳೆಯಾಗಿದೆ. ಹವಾಮಾನ ಇಲಾಖೆ ಮುಂದಿನ ಮೂರ್ನಾಲ್ಕು ದಿನ ಜಿಲ್ಲೆಯಾದ್ಯಂತ ಸಾಧಾರಣ ಮಳೆ ಬೀಳಲಿದೆ ಎಂಬ ಮುನ್ಸೂಚನೆ ನೀಡಿತ್ತು. ಮುಂಜಾನೆ ಕೆಲ ಕಾಲ ಮಳೆ ಸುರಿದಿದ್ದು, ನಂತರ ಬಿಸಿಲಿನ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆ ಧಾರಾಕಾರವಾಗಿ ಮಳೆಯಾಗಿದೆ. ಮೋಡ ಮುಸುಕಿದ ವಾತಾವರಣ ಇದ್ದು ಮುಂದಿನ ಎರಡು-ಮೂರು ದಿನ ಜಿಲ್ಲೆಯಾದ್ಯಂತ ಮಳೆ ಬೀಳುವ ಸಾಧ್ಯತೆ ಇದೆ. ದಿಢೀರ್ ಮಳೆ ಬಿದ್ದಿದ್ದರಿಂದ ನಗರದಲ್ಲಿ ವಾಹನ ಸವಾರರು ಪರದಾಡಬೇಕಾಯಿತು. ಇದನ್ನೂ ಓದಿ: ನಗರಸಭೆ ಕರ ವಸೂಲಾತಿಯ ಲಕ್ಷಾಂತರ ರೂ. ದುರುಪಯೋಗ- ಸಿಬ್ಬಂದಿ ಆಸ್ತಿ ಮುಟ್ಟುಗೋಲು ಹಾಕಲು ಮುಂದಾದ ಅಧಿಕಾರಿಗಳು

ಬಿಸಿಲನಾಡು ವಿಜಯಪುರ ಅಕ್ಷರ ಸಹ ಮಲೆನಾಡಾಗಿ ಮಾರ್ಪಟ್ಟಿದೆ. ಬೆಂಬಿಡದೆ ಮಳೆ ಸುರಿಯುತ್ತಿದ್ದು, ಜಿಲ್ಲೆಯಾದ್ಯಂತ ಮಳೆ ಆವಾಂತರ ಸೃಷ್ಟಿಯಾಗಿದೆ. ಜಿಲ್ಲೆಯ ಹಲವೆಡೆ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ಜನಜೀವನ ಅಸ್ಥವ್ಯಸ್ಥವಾಗಿದೆ. ಇಂದು ಜಿಲ್ಲೆಯಲ್ಲಿ 9.33 ಎಂಎಂ ಮಳೆ ಆಗಿದೆ. ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ಸ್ವಂತ ಹಣ ಹಾಕಿ ಸಾರ್ವಜನಿಕರಿಂದಲೇ ರಸ್ತೆ ದುರಸ್ತಿ- ಭಾರೀ ವಾಹನಕ್ಕೆ ಅವಕಾಶ ನೀಡಲು ಜಿಲ್ಲಾಡಳಿತಕ್ಕೆ ಆಗ್ರಹ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ವ್ಯಾಪ್ತಿ ಧಾರಕಾರ ಮಳೆಯಾಗಿದ್ದು, ಭಾರೀ ಮಳೆಗೆ ಶಾಮಿಯಾನ ಜನರ ಮೇಲೆ ಕುಸಿದು ಬಿದ್ದಿದೆ. ಮದ್ದೂರು ಕ್ರೀಡಾಂಗಣದಲ್ಲಿ ನಡೆದ ಪೌರಕಾರ್ಮಿಕರ ಕ್ರೀಡಾಕೂಟಕ್ಕೆ ಶಾಮೀಯಾನ ಹಾಕಲಾಗಿತ್ತು. ಈ ವೇಳೆ ಮಳೆ ಬಂದು ಕುಸಿದು ಬಿದ್ದಿದೆ. ಸತತ ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಆದರೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇದನ್ನೂ ಓದಿ: ಹುಟ್ಟಿದಾಗಿನಿಂದಲೂ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಯುವತಿ ಪಿಯುಸಿ ಪಾಸ್

ಇತ್ತ ಗಡಿ ಜಿಲ್ಲೆ ಬೀದರ್ ನಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಇಂದು ಕೂಡ ಭಾರೀ ಮಳೆ ಸುರಿದಿದ್ದು, ಸದ್ಯ ಯಾವುದೇ ಅವಾಂತರಗಳು ಸೃಷ್ಟಿಯಾಗಿಲ್ಲ. ಬೀದರ್, ಬಸವಕಲ್ಯಾಣ, ಭಾಲ್ಕಿ, ಔರಾದ್ ಚಿಟ್ಟಗುಪ್ಪ ಸೇರಿದಂತೆ ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು, ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

Leave a Reply

Your email address will not be published. Required fields are marked *

Back to top button