ಕಾರವಾರ/ಉಡುಪಿ/ಚಿಕ್ಕಮಗಳೂರು: ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಇಂದು ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವೆಡೆ ಬಿರುಗಾಳಿ ಜೊತೆ ಮಳೆಯ ಆರ್ಭಟ ಪ್ರಾರಂಭವಾಗಿದೆ.
ವಾಯುಭಾರ ಕುಸಿತ ಹಾಗೂ ಗಾಳಿಯ ಆರ್ಭಟಕ್ಕೆ ಅರಬ್ಬಿ ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಹಾಗೆಯೇ ಉತ್ತರ ಕನ್ನಡದ ಹಲವೆಡೆ ಮಧ್ಯಾಹ್ನದಿಂದ ಮಳೆರಾಯನ ಆರ್ಭಟ ಜೋರಾಗಿದೆ. ಇತ್ತ ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆಯಿರುವ ಕಾರಣಕ್ಕೆ ಜಿಲ್ಲಾಡಳಿತ ಹಾಗೂ ಮೀನುಗಾರಿಕಾ ಇಲಾಖೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿ, ಕಟ್ಟೆಚ್ಚರ ವಹಿಸಲಾಗಿದೆ.
Advertisement
Advertisement
ಅಷ್ಟೇ ಅಲ್ಲದೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕೂಡ ಮಳೆರಾಯ ಆರ್ಭಟಿಸಿದ್ದಾನೆ. ಗುಡುಗು-ಸಿಡಿಲು ಸಹಿತ ವರುಣ ಸುರಿಯುತ್ತಿದ್ದಾನೆ. ಬಾಳೆಹೊನ್ನುರು, ಮೂಡಿಗೆರೆ, ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಬೆಳಗ್ಗಿನಿಂದಲೂ ಜಿಲ್ಲಾದ್ಯಂತ ಅಲ್ಲಲ್ಲೇ ತುಂತುರು ಮಳೆಯಾಗಿತ್ತು, ಆದರೆ ಸಂಜೆ ವೇಳೆಗೆ ಮಲೆನಾಡಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಇದರಿಂದ ಸದ್ಯ ಮಳೆಯಾಗುತ್ತಿರುವ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
Advertisement
Advertisement
ಹಾಗೆಯೇ ಉಡುಪಿಯಲ್ಲಿ ಕೂಡ ಧಾರಾಕಾರ ಮಳೆಯಾಗಿದ್ದು ಮುಂಗಾರು ಮಳೆ ಪ್ರವೇಶದ ಮುನ್ಸೂಚನೆ ನೀಡಿದೆ. ಉಡುಪಿ, ಕಾಪು ತಾಲೂಕಿನ ಅಲ್ಲಲ್ಲಿ ಮಳೆಯಾಗಿದೆ. ಕುಂದಾಪುರ, ಬೈಂದೂರು ಕೆಲವೆಡೆ ತುಂತುರು ಮಳೆ ಸಿಂಚನವಾಗಿದೆ. ಇನ್ನೆರಡು ದಿನದಲ್ಲಿ ಭಾರೀ ಮಳೆ ನಿರೀಕ್ಷೆಯಿದ್ದು, ಜಿಲ್ಲೆಯಾದ್ಯಂತ ಕಾರ್ಮೋಡ ಆವರಿಸಿದ ವಾತಾವರಣ ನಿರ್ಮಾಣವಾಗಿದೆ.