Wednesday, 18th July 2018

ಗದಗ, ದಾವಣಗೆರೆಯಲ್ಲಿ ಭಾರೀ ಮಳೆ: ಹಳ್ಳದ ನೀರಿನಲ್ಲಿ ಸಿಲುಕಿಕೊಂಡವು ವಾಹನಗಳು

ಗದಗ/ದಾವಣಗೆರೆ: ಪ್ರತಿದಿನ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ಮಳೆಯಿಂದಾಗಿ ಕಾರೊಂದು ಕೊಚ್ಚಿ ಹೋಗಿದ್ದು, ಅದನ್ನು ಸ್ಥಳೀಯರು ಹೊರ ತೆಗೆದಿರುವ ಘಟನೆ ದಾವಣಗೆರೆ ತಾಲೂಕಿನ ಕುಂಟಪಾಲನಹಳ್ಳಿಯ ಸಮೀಪದಲ್ಲಿ ನಡೆದಿದೆ.

ಮಂಗಳವಾರ ಪ್ರೊ.ನಿಂಗಪ್ಪ ಎಂಬುವವರ ಕಾರನ್ನು ಚಾಲಕ ಸಂಬಂಧಿಕರನ್ನು ಕರೆತರಲು ದಾವಣಗೆರೆಯಿಂದ ಲೋಕಿಕೆರೆ ಗ್ರಾಮಕ್ಕೆ ಚಲಾಯಿಸಿಕೊಂಡು ಹೋಗುತ್ತಿದ್ದ. ಆದರೆ ಅತಿಯಾಗಿ ಸುರಿದ ಮಳೆಯ ಪರಿಣಾಮ ಕುಂಟಪಾಲನಹಳ್ಳಿಯ ಪಕ್ಕದಲ್ಲಿದ್ದ ಹಳ್ಳವೊಂದು ತುಂಬಿ ಸೇತುವೆಯ ಮೇಲೆ ನೀರು ಹರಿಯಲು ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬರುತ್ತಿದ್ದ ಕಾರು ಸೇತುವೆಯ ಮಧ್ಯ ಸಿಲುಕಿಗೊಂಡಿದ್ದು, ಮುಂದೆ ಹೋಗಲು ಸಾಧ್ಯವಾಗಲಿಲ್ಲ. ತಕ್ಷಣ ಚಾಲಕ ಕಾರಿನಿಂದ ಕೆಳಗಿಳಿದಿದ್ದಾನೆ. ನೀರಿನ ರಭಸ ಹೆಚ್ಚಾದಂತೆ ಕಾರು ಕೊಚ್ಚಿ ಹೋಗಿ ಕೆಸರಲ್ಲಿ ಸಿಲುಕಿಕೊಂಡಿದೆ. ಇಂದು ಆ ಕಾರನ್ನು ಗ್ರಾಮಸ್ಥರು ಬಂದು ಮೇಲಕ್ಕೆತ್ತಿದ್ದಾರೆ.

ಇನ್ನೂ ಮಳೆಯಿಂದ ಲಾರಿಯೊಂದು ತಡರಾತ್ರಿ ಹಳ್ಳಕ್ಕೆ ಉರುಳಿ ಬಿದ್ದಿರುವ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದ ಬಳಿ ನಡೆದಿದೆ.

ಗದಗ ನಗರದ ಮಹ್ಮದ್ ಹುಸೇನ್ ಎಂಬುವವರಿಗೆ ಸೇರಿದ ಲಾರಿ ಬಿತ್ತನೆ ಬೀಜವನ್ನು ಸಾಗಿಸುತ್ತಿತ್ತು. ಮಂಗಳವಾರ ಲಾರಿ ಕೊಪ್ಪಳ ಜಿಲ್ಲೆಯ ಕುಕನೂರಿಗೆ ಬಿತ್ತನೆ ಬೀಜವನ್ನು ತಲುಪಿಸಿ ಹಾತಲಗೇರಿ ಮಾರ್ಗವಾಗಿ ಗದಗಕ್ಕೆ ವಾಪಾಸಾಗುತ್ತಿತ್ತು. ಕಳೆದ ಕೆಲ ದಿನಗಳಿಂದ ಸುರಿಯುತ್ತಿರೋ ಭಾರಿ ಮಳೆಗೆ ಗದಗ ಹಾತಲಗೇರಿ ರಸ್ತೆ ಮಧ್ಯದಲ್ಲಿ ಹರಿಯುವ ಗದ್ದಿಹಳ್ಳ ತುಂಬಿ ರಸ್ತೆಯ ಮೇಲೆ ಹರಿದ ಪರಿಣಾಮ ಲಾರಿ ನೀರಿನಲ್ಲಿ ಸಿಲುಕಿಕೊಂಡಿತ್ತು.

ಈ ಘಟನೆ ನಡೆದಾಗ ಲಾರಿಯಲ್ಲಿದ್ದ ಚಾಲಕ ರಾಜೇಸಾಬ್ ಸೇರಿದಂತೆ ಇತರೇ 5 ಜನ ಹಳ್ಳದಲ್ಲಿ ಸಿಲುಕಿಕೊಂಡಿದ್ದರು. ಆಗ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಹಾತಲಗೇರಿ ಗ್ರಾಮಸ್ಥರು ಲಾರಿಯಲ್ಲಿದ್ದವರನ್ನ ರಕ್ಷಣೆ ಮಾಡುವ ಮೂಲಕ ಜೀವಹಾನಿ ತಪ್ಪಿಸಿದ್ದಾರೆ.

ಇದನ್ನು ಓದಿ: ಹಾವೇರಿ: ಪ್ರವಾಹದಲ್ಲಿ ಸಿಲುಕಿದ ಆಟೋ ಚಾಲಕನನ್ನು ಪ್ರಾಣದ ಹಂಗು ತೊರೆದು ರಕ್ಷಸಿದ ಯುವಕ

Leave a Reply

Your email address will not be published. Required fields are marked *