ಬೆಂಗಳೂರು: ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರ ಧಾರಾಕಾರ ಮಳೆಯಾಗಿದ್ದು, ಇಂದು ಉಡುಪಿ ಜಿಲ್ಲೆಯಲ್ಲಿ ಮುಂಜಾನೆಯಿಂದಲೇ ಮಳೆ ಆರಂಭವಾಗಿದೆ.
ನಗರದ ಬೈಂದೂರು, ಕಾಪು ಮತ್ತು ಹೆಬ್ರಿಯಲ್ಲಿ ಭಾರೀ ಮಳೆಯಾಗಿದೆ. ಇನ್ನು ಮಳೆಯಿಂದ ಬೈಂದೂರಿನ ಒತ್ತಿನೆಣೆಯಲ್ಲಿ ಗುಡ್ಡಕುಸಿತವಾಗಿದೆ. ಗುಡ್ಡ ಕುಸಿಯದಂತೆ ರಚಿಸಿದ್ದ ಸ್ಲೋಪ್ ಪ್ರೊಟೆಕ್ಷನ್ ವಾಲ್ ಬಳಿಯೇ ಕುಸಿತವಾಗಿದೆ. ಗುಡ್ಡ ಕುಸಿತದಿಂದ ಹೆದ್ದಾರಿಗೆ ಮಣ್ಣು ಬಿದ್ದಿದ್ದರಿಂದ ತೆರವು ಕಾರ್ಯ ಆರಂಭವಾಗಿದೆ.
Advertisement
Advertisement
ಇನ್ನು ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಜಿಲ್ಲೆಯ ಸೋಮವಾರಪೇಟೆ ಶುಂಟಿಕೊಪ್ಪ, ಸಿದ್ದಾಪುರ ವೀರಾಜಪೇಟೆ, ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ಸುರಿದ ಮಳೆಯಿಂದಾಗಿ ಇಳೆ ತಂಪಾಗಿದೆ. ಬುಧವಾರ ಬಹುತೇಕ ಕಡೆಗಳಲ್ಲಿ ಸುಮಾರು ಎರಡು ಘಂಟೆಗಳ ಕಾಲ ಧಾರಕಾರವಾಗಿ ವರುಣನ ಅರ್ಭಟ ಹೆಚ್ಚಾಗಿತ್ತು. ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೇ ಗ್ರಾಮೀಣ ಭಾಗದ ಜನರು ಕತ್ತಲೆಯಲ್ಲಿಯೇ ದಿನ ದೂಡುವಂತೆಯಾಗಿತ್ತು. ಮಳೆಯಿಂದ ಕಾವೇರಿ ಲಕ್ಮಣ ತೀರ್ಥ ನದಿ ತುಂಬಿದ್ದು, ಆತಂಕದಲ್ಲಿ ನದಿ ಪಾತ್ರದ ಜನರ ಜೀವನ ಅಸ್ತವ್ಯಸ್ತವಾಗಿದೆ. ಜೊತೆಗೆ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ.
Advertisement
ಮಡಿಕೇರಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಎಂದಿನಂತೆ ನಡೆಯಲಿದೆ ಎಂದು ಡಿಡಿಪಿಐ ಮಂಜುಳಾ ಅವರು ಪ್ರಕಟಿಸಿದ್ದಾರೆ.
Advertisement
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರದಲ್ಲಿ ಗಾಳಿ ಸಹಿತ ವರುಣನ ಅಬ್ಬರ ಮುಂದುವರೆದಿದೆ. ಕಳೆದ ಹದಿನೈದು ದಿನಗಳ ಹಿಂದೆ ಸುರಿದ ಮಳೆಯ ಅವಾಂತರಗಳಿಂದ ಜನಸಾಮಾನ್ಯರು ಹೊರಬರುವ ಮುನ್ನವೇ ಮಲೆನಾಡಿನಲ್ಲಿ ಮತ್ತೆ ವರುಣನ ಅಬ್ಬರ ಮುಂದುವರೆದಿದೆ.
ಕಳಸ, ಚಾರ್ಮಾಡಿ, ಬಾಳೆಹೊನ್ನೂರು ಭಾಗದಲ್ಲಿ ದಟ್ಟ ಮಂಜು ಸೇರಿದಂತೆ ಧಾರಾಕಾರ ಮಳೆಯಾಗಿದೆ. ತುಂಗಾಭದ್ರಾ ಹಾಗೂ ಹೇಮಾವತಿ ಮೈದುಂಬಿ ಹರಿಯುತ್ತಿದ್ದು, ನದಿಪಾತ್ರದ ಹೊಲಗದ್ದೆಗಳು ಮಳೆಯಿಂದ ತೋಯ್ದು ಹೋಗಿವೆ. ಇನ್ನೂ ಶೃಂಗೇರಿ ಸುತ್ತಮುತ್ತಲೂ ಭಾರೀ ಮಳೆಯಾಗಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶಾರದಾಂಬೆ ದೇಗುಲದ ಕಪ್ಪೆಶಂಕರನಾರಾಯಣ, ಶ್ರೀಗಳ ಸಂಧ್ಯಾವಂದನೆ ಮಂಟಪ ಮುಳುಗುವ ಹಂತ ತಲುಪಿದೆ. ಶೃಂಗೇರಿ ದೇವಾಲಯಕ್ಕೆ ಹೋಗುವುದಕ್ಕೆ ಇದ್ದ ಮತ್ತೊಂದು ರಸ್ತೆ ಕೂಡ ಮುಳುಗಡೆಯಾಗಿದ್ದು, ಗಾಂಧಿ ಮೈದಾನಕ್ಕೂ ಆವರಿಸಿದೆ. ಮಲೆನಾಡಿನ ಸರಾಸರಿ ಮಳೆಗಿಂತ ಈ ಬಾರಿ ಶೇಕಡಾ 82ರಷ್ಟು ಮಳೆ ಹೆಚ್ಚಾಗಿರುವುದರಿಂದ ಮಲೆನಾಡು ಮಳೆಯಿಂದ ಮುಚ್ಚಿಕೊಂಡಂತಾಗಿದೆ.