ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳೆದ 24 ಗಂಟೆ ಸಮಯದಿಂದ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಘೋಷಣೆ ಮಾಡಲಾಗಿದೆ.
ಮೂಡಿಗೆರೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಭಾರೀ ಮಳೆಯಾಗಿತ್ತು. ಪರಿಣಾಮ ಹೇಮಾವತಿ ಮೈದುಂಬಿ ಹರಿಯುತ್ತಿದೆ. ಇತ್ತ ತಾಲೂಕಿನಾದ್ಯಂತ ಗದ್ದೆ-ತೋಟಗಳು ಜಲಾವೃತವಾಗಿದ್ದು, ಮುಂಜಾಗ್ರತ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ. ಮೂಡಿಗೆರೆ ತಾಲೂಕು ಅಧಿಕಾರಿ ರಜೆ ಘೋಷಣೆ ಮಾಡಿದ್ದಾರೆ. ಮಳೆಯಿಂದ ಮುನ್ನೆಚ್ಛರಿಕೆಯ ಕ್ರಮವಾಗಿ ರಜೆ ನೀಡಲಾಗಿದೆ.
ಇತ್ತ ಕಾವೇರಿ ಜಲಾನಯನ ಪ್ರದೇಶ ಮಡಿಕೇರಿಯ ಭಾಗಮಂಡಲದಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಕಳೆದ ವರ್ಷದ ಜಲಪ್ರವಾಹದಿಂದ ಆತಂಕ ಈಗಲೂ ಜನರ ಮನದಲ್ಲಿ ಮನೆ ಮಾಡಿದೆ. ಅದರಲ್ಲೂ ಮಡಿಕೇರಿ – ಮಂಗಳೂರು ಹೆದ್ದಾರಿಯ ಮದೆನಾಡು ಬಳಿ ದುರಸ್ತಿ ಮಾಡಿದ್ದರೂ ಬಿರುಕು ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಚರಿಸಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಚಿಕ್ಕಮಗಳೂರು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿ, ಹೊರಟ್ಟಿ, ಕೊಟ್ಟಿಗೆಹಾರ, ಜಾಣಿಗೆ, ಗೋಣಿಬೀಡುವಿನಲ್ಲಿ ಹೊಲ-ಗದ್ದೆ, ಕಾಫಿ ತೋಟಗಳು ಜಲಾವೃತಗೊಂಡಿವೆ.
ಭಾರೀ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳ ರಭಸವೂ ಹೆಚ್ಚಿದೆ. ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಕಾರವಾರ ನಗರದ ಅರಗಾದಲ್ಲಿರುವ ಕದಂಬ ನೌಕಾನೆಲೆ ಭಾಗದ ಹತ್ತು ಎಕರೆಗೂ ಹೆಚ್ಚು ಪ್ರದೇಶಗಳ ಜಲಾವೃತವಾಗಿದೆ. ಇತ್ತ ಬೆಂಗಳೂರಿನಲ್ಲೂ ಇಂದು ಸಂಜೆ ವೇಳೆಗೆ ವರುಣನ ಸಿಂಚನವಾಯ್ತು. ಮುಂದಿನ 4 ದಿನಗಳ ಕಾಲ ಮಳೆ ಆಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.