ಚಿಕ್ಕಮಗಳೂರು: ಜಿಲ್ಲೆಯ ಮುಳ್ಳಯ್ಯನಗಿರಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ದತ್ತಪೀಠ ಮಾರ್ಗದಲ್ಲಿ ಗುಡ್ಡ ಕುಸಿತ ಉಂಟಾಗಿದೆ.
ಕಳೆದೊಂದು ತಿಂಗಳಿನಿಂದ ಈ ಭಾಗದಲ್ಲಿ ಹೆಚ್ಚಿನ ಮಳೆ ಉಂಟಾಗುತ್ತಿದ್ದು, ಹದಿನೈದು ದಿನಗಳಿಂದ ಭಾರೀ ಗಾಳಿ ಸಹಿತ ಮಳೆ ಹೆಚ್ಚಾಗಿದೆ. ಇದರಿಂದ ಎಂಟತ್ತು ದಿನಗಳಲ್ಲಿ ಸಣ್ಣ ಪ್ರಮಾಣದ ಗುಡ್ಡದ ಮಣ್ಣು ಕುಸಿತದ ಘಟನೆಗಳು ನಡೆದಿತ್ತು. ಆದರೆ ಇಂದು ಬೆಳಗ್ಗಿನ ಜಾವ ಕವಿಕಲ್ ಗಂಡಿ ಸಮೀಪ ಗುಡ್ಡ ಕುಸಿದಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
Advertisement
ಈ ಮಾರ್ಗವಾಗಿ ಚಿಕ್ಕಮಗಳೂರಿಗೆ ಬರುವ ಪ್ರಯಾಣಿಕರು ವಾಹನಗಳಲ್ಲೇ ಉಳಿದುಕೊಂಡಿದ್ದಾರೆ. ಇನ್ನು ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು ತೋಟದೊಳಗಿನ ಕಾಲು ದಾರಿಯಲ್ಲಿ ನಡೆದೆ ಹೋಗುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಗ್ರಾಮಾಂತರ ಪೊಲೀಸರು ಜೆಸಿಬಿ ಮೂಲಕ ಕುಸಿದಿರುವ ಗುಡ್ಡದ ಮಣ್ಣನ್ನು ಮತ್ತೊಂದು ಬದಿಗೆ ತಳ್ಳಿ ಸಂಚಾರವನ್ನು ಸುಗಮಗೊಳಿಸುತ್ತಿದ್ದಾರೆ. ಗುಡ್ಡ ಕುಸಿತದಿಂದ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.