– ಆಸ್ಪತ್ರೆ ಜಲಾವೃತ, ರೋಗಿಗಳ ಪರದಾಟ
ರಾಯಚೂರು: ಜಿಲ್ಲೆಯಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ರಾಯಚೂರು ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುತ್ತಿದ್ದಾರೆ. ನಗರದ ಸಿಯತಲಾಬ್, ಜಲಾಲನಗರ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಮನೆಯಿಂದ ನೀರು ಹೊರಹಾಕಲು ಇನ್ನೂ ಹರಸಾಹಸ ಪಡುತ್ತಿದ್ದಾರೆ.
ರಾತ್ರಿಯಿಂದ ಮನೆಯಲ್ಲಿ ನೀರು ತುಂಬಿ, ವಿದ್ಯುತ್ ಸಹ ಇಲ್ಲದೆ ಜನ ನರಕಯಾತನೆ ಪಟ್ಟಿದ್ದಾರೆ. ಮನೆಯಲ್ಲಿನ ದವಸ ಧಾನ್ಯ ನೀರುಪಾಲಾಗಿದೆ. ಚರಂಡಿಗಳು ತುಂಬಿ ರಸ್ತೆಗಳು ಕಾಲುವೆಯಂತಾಗಿವೆ. ರಾಜಕಾಲುವೆಯ ಅಸಮರ್ಪಕ ನಿರ್ವಹಣೆಯಿಂದಾಗಿ ಕೊಳಚೆ ನೀರು ಮನೆಗಳಿಗೆ ನುಗ್ಗಿ ಜನ ಪರದಾಡಿದ್ದಾರೆ.
ಮಳೆ ಬಂದಾಗಲೆಲ್ಲಾ ಇದೇ ಪರಸ್ಥಿತಿ ಉಂಟಾಗುತ್ತಿದ್ದು ಚಿಕ್ಕಮಕ್ಕಳು, ವಯೋವೃದ್ದರು ಸೇರಿದಂತೆ ಪ್ರತಿಯೊಬ್ಬರು ಈ ಪ್ರದೇಶಗಳಲ್ಲಿ ವಾಸಿಸುವುದೇ ಒಂದು ಶಾಪ ಅನ್ನೋ ರೀತಿ ಕಷ್ಟ ಅನುಭವಿಸುತ್ತಿದ್ದಾರೆ. ಜನ ಇಷ್ಟೆಲ್ಲಾ ಕಷ್ಟ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕೂಡಲೇ ಸ್ಥಳಕ್ಕೆ ಆಗಮಿಸಿ ಅವ್ಯವಸ್ಥೆ ಸರಿಪಡಿಸದಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹತ್ತಿ, ಭತ್ತದ ಬೆಳೆ ಹಾನಿಯಾಗಿದೆ. ರಾಯಚೂರು ತಾಲೂಕಿನ ಡೊಂಗರಾಂಪುರದಲ್ಲಿ ಲಕ್ಷಾಂತರ ರೂಪಾಯಿ ಹತ್ತಿ ಬೆಳೆ ನೀರುಪಾಲಾಗಿದೆ. ಕಾಯಿ ಕಟ್ಟುವ ಹಂತದಲ್ಲಿನ ಹತ್ತಿ ಬೆಳೆ ಹಾನಿಯಾಗಿರುವುದು ರೈತರನ್ನ ಕಂಗೆಡಿಸಿದೆ.
ರಿಮ್ಸ್ ಆಸ್ಪತ್ರೆ ಜಲಾವೃತ:
ನಿನ್ನೆ ರಾತ್ರಿಯಿಡೀ ಸುರಿದ ಮಳೆಗೆ ನಗರದ ರಿಮ್ಸ್ ಆಸ್ಪತ್ರೆ ರೋಗಿಗಳು ಪರದಾಡಿದ್ದಾರೆ. ಆಸ್ಪತ್ರೆ ಬ್ಲಡ್ ಬ್ಯಾಂಕ್, ವಾರ್ಡ್‍ಗಳಿಗೆ ಕಿಟಕಿಗಳ ಮೂಲಕ ಮಳೆ ನೀರು ನುಗ್ಗಿದೆ. ಆಸ್ಪತ್ರೆ ಸುತ್ತ ನೀರು ನಿಂತು ಇಡೀ ರಿಮ್ಸ್ ಜಲಾವೃತವಾಗಿದೆ. ಇದನ್ನೂ ಓದಿ: ಬೆಂಕಿ ಇಲ್ಲದೆ ಹೊಗೆಯಾಡಲ್ಲ- ಡಿಕೆಶಿ ಹೀಗಂದಿದ್ಯಾಕೆ..?
ಎಲ್ಲೆಡೆ ನೀರು ಆವರಿಸಿರುವುದರಿಂದ ಆಸ್ಪತ್ರೆ ಹೊರಗೆ ಹೋಗಲು, ಒಳಗೆ ಬರಲು ರೋಗಿಗಳು ಪರದಾಡುತ್ತಿದ್ದಾರೆ. ರಸ್ತೆಯಲ್ಲಿ ನೀರು ನಿಂತ ಹಿನ್ನೆಲೆ ಆಸ್ಪತ್ರೆ ಬಳಿ ಆಟೋರಿಕ್ಷಾಗಳು ಸಹ ಬರುತ್ತಿಲ್ಲ. ರೋಗಿಗಳು ನೀರಿನಲ್ಲೇ ನಡೆದುಕೊಂಡು ರಸ್ತೆ ದಾಟುತ್ತಿದ್ದಾರೆ. ರಾತ್ರಿಯಿಂದ ಮಳೆಬಂದರೂ ನೀರು ಖಾಲಿಮಾಡಲು ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಮುಂದಾಗದಿರುವುದಕ್ಕೆ ರೋಗಿಗಳ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಯಡಿಯೂರಪ್ಪ, ವಿಜಯೇಂದ್ರ ಆಪ್ತರೇ ಟಾರ್ಗೆಟ್- ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ಅನುಮಾನ