ಬೆಂಗಳೂರು: ನಗರದ ಸೇರಿದಂತೆ ಜಿಲ್ಲೆಯಾದ್ಯಂತ ನಿನ್ನೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿತ್ತು. ಸಿಲಿಕಾನ್ ಸಿಟಿಯಲ್ಲಿ ಮಳೆಗೆ ಐವರು ಬಲಿಯಾಗಿದ್ದಾರೆ. ಅಲ್ಲದೇ ಜಾನುವಾರುಗಳು ಕೂಡ ಬಲಿಯಾಗಿವೆ.
ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಕೂಡಾ ರಾತ್ರಿ ವರುಣ ಆರ್ಭಟಿಸಿದ್ದಾನೆ. ಅದರಲ್ಲೂ ಚನ್ನಪಟ್ಟಣ ಹಾಗೂ ಕನಕಪುರ ತಾಲೂಕುಗಳಲ್ಲಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಇನ್ನು ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೇ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳಲ್ಲಿ ಮಳೆಯ ನೀರು ನಿಂತು ಬೈಕ್ ಸವಾರರು ಪರದಾಡಿದ್ದಾರೆ. ಜೋರು ಮಳೆಯಾಗಿ ನಿಂತ ಬಳಿಕ ಮಧ್ಯರಾತ್ರಿವರೆಗೂ ಸಹ ತುಂತುರು ಮಳೆ ಬೀಳುತ್ತಲೇ ಇದೆ.
Advertisement
ಕೋಟೆನಾಡು ಚಿತ್ರದುರ್ಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಜೋಗಿಮಟ್ಟಿ ರಸ್ತೆ, ಐಯುಡಿಪಿ ಲೇಔಟ್, ನೆಹರೂನಗರ, ಜೈನ್ ಕಾಲೋನಿ, ಮಾರುತಿನಗರ, ಹೌಸಿಂಗ್ ಬೋರ್ಡ್ ಕಾಲೋನಿ ಸೇರಿದಂತೆ ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿವೆ. ರಾಜಕಾಲುವೆಗಳ ಒತ್ತುವರಿಯಿಂದ ರಸ್ತೆಗೆ ನುಗ್ಗಿ ಸಂಚಾರ ಅಸ್ತವ್ಯಸ್ತವಾಗಿದೆ. ಐತಿಹಾಸಿಕ ಹೊಂಡಗಳು ಭರ್ತಿಯಾಗಿ ನೀರು ಕೋಡಿ ಹರಿಯುತ್ತಿದೆ.
Advertisement
Advertisement
ಚಿನ್ನದ ನಾಡು ಕೋಲಾರದಲ್ಲೂ ರಾತ್ರಿ ಸುರಿದ ಮಳೆ ಅನೇಕ ಅವಾಂತರ ಸೃಷ್ಟಿಸಿದೆ. ಬಂಗಾರಪೇಟೆ ತಾಲೂಕಿನ ತೊರಗನದೊಡ್ಡಿ ಗ್ರಾಮದ ಕೆರೆ ಕೋಡಿ ಒಡೆದು ರೈತರ ಬೆಳೆಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳೆ ನಷ್ಟವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಅಂತ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ. ಇನ್ನು ಸ್ಥಳಕ್ಕೆ ಬಾರದ ಕಂದಾಯ ಅಧಿಕಾರಿಗಳ ವಿರುದ್ದ ರೈತರ ಕಿಡಿಕಾರಿದ್ರು.
Advertisement
ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಕೂಡ ಗುಡುಗು ಸಹಿತ ಸುರಿದ ಅಬ್ಬರದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗೆ ನೀರು ನುಗ್ಗಿ ವಾಹನ ಸವಾರರ ಪರದಾಡಿದ್ದಾರೆ. ಚಿಕ್ಕಮಗಳೂರಿನ ಅಂಬಳೆ ಗ್ರಾಮದಲ್ಲಿ ಸಿಡಿಲು ಬಡಿದು ರೈತ 55 ವರ್ಷದ ಲಕ್ಷ್ಮಯ್ಯ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ಅವಘಡ ಸಂಭವಿಸಿದೆ. ಚಿಕ್ಕಮಗಳೂರು ಪಟ್ಟಣ ಅಲ್ಲದೇ ಅಲ್ಲಂಪುರ, ಹಿರೇಮಗಳೂರು, ಅಂಬಳೆ ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಇನ್ನು ನೋವು ಕೇಳದ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಸಿಡಿಲು,ಗುಡುಗು ಸಹಿತ ಭಾರಿ ಮಳೆಯಾಗಿದೆ. ಜಂಬಾನಿ ಗ್ರಾಮದಲ್ಲಿ ಸಿಡಿಲು ಬಡಿದು ಮೇಯಲು ಬಿಟ್ಟಿದ್ದ ಹಸು ಸಾವನ್ನಪ್ಪಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ಭಾರಿ ಮಳೆಗೆ ರಸ್ತೆ ಕಾಣದೇ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‍ಗೆ ಕ್ರೂಸರ್ ಡಿಕ್ಕಿಯಾಗಿ 8 ಮಂದಿಗೆ ಗಾಯವಾಗಿದೆ.
ಚಿಕ್ಕೋಡಿ ಹೊರವಲಯದ ಅಂಕಲಿ ರಸ್ತೆಯ ಬಿ.ಕೆ.ಕಾಲೇಜು ಬಳಿ ಘಟನೆ ನಡೆದಿದೆ. ಗಾಯಾಳುಗಳಿಗೆ ಚಿಕ್ಕೋಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹುಕ್ಕೇರಿ, ಅಥಣಿ ತಾಲೂಕಿನಲ್ಲಿ ವರುಣ ಆರ್ಭಟಿಸಿದ್ದಾನೆ. ಅಥಣಿ ತಾಲೂಕಿನ ಮಲಾಬಾದ ಗ್ರಾಮದಲ್ಲಿ ಸಿಡಿಲು ಬಡಿದು ಸಿದ್ದಪ್ಪ ಭೀಮಪ್ಪ ವಾಘಮೋಡೆ ಮೃತಪಟ್ಟಿದ್ದಾರೆ. ಗುಡುಗು ಸಿಡಿಲಿನ ಮಳೆ ಸುರಿಯುವ ವೇಳೆ ಮನೆ ಮುಂದಿದ್ದ ಗುಡಿಸಲುಗಳನ್ನು ಒಳಗೆ ಕಟ್ಟುವ ವೇಳೆ ಸಿಡಿಲು ಬಡಿದಿದೆ.
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಳೆ ನೀರು ನುಗ್ಗಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ದಾವಣಗೆರೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಜಲಾವೃತವಾಗಿದ್ದು, ಪ್ರಯಾಣಿಕರು ಪರದಾಡಿದ್ದಾರೆ. ಇನ್ನು ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸತತ ಮಳೆಯಾಗ್ತಿದೆ.
ಮೈಸೂರಿನಲ್ಲಿ ಅಬ್ಬರದ ಮಳೆಗೆ ಅರಮನೆ, ಅಗ್ರಹಾರ, ನಜರ್‍ಬಾದ್, ಅರಸು ರಸ್ತೆಗಳು ಜಲಾವೃತವಾಗಿದ್ದು ವಾಹನ ಸವಾರರು ಪರದಾಡಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹಕ್ಯಾಳ ಬಳಿ ಸೇತುವೆ ದಾಟುವಾಗ ನೀರಿನ ರಭಸಕ್ಕೆ ಯುವಕ ನೀರುಪಾಲಾಗಿದ್ದಾನೆ. ನೀರುಪಾಲಾದ ಯುವಕನ್ನ ಹಂದಿಖೇರಾ ಗ್ರಾಮದ 26 ವರ್ಷದ ಶಿವಾಜಿ ಚವ್ಹಾಣ ಎಂಬುವುದಾಗಿ ಗುರುತಿಸಲಾಗಿದೆ.