ಬೆಂಗಳೂರು: ಸಿಲಿಕಾನ್ ಸಿಟಿಯಷ್ಟೇ ಅಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವೆ ಮುಳುಗಡೆಯಾಗಿದ್ದು, ಇದರಲ್ಲಿ ಬೈಕ್ ಸವಾರರು ತಗ್ಲಾಕೊಂಡು ಪರದಾಡಿದ್ರು. ಕೊನೆಗೆ ಹಗ್ಗದ ಮೂಲಕ ಸ್ಥಳೀಯರು ರಕ್ಷಣೆ ಕಾರ್ಯ ಮಾಡಲಾಯ್ತು.
Advertisement
ತೊಗರಿ ಕಣಜ ಕಲಬುರಗಿಯಲ್ಲಿ ಮಳೆರಾಯನ ಅಬ್ಬರ ತಗ್ಗಿದ್ದರೂ ಪ್ರವಾಹದ ಭೀತಿ ಎದುರಾಗಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಕಬ್ಬು, ಬಾಳೆ ಸೇರಿದಂತೆ ಇನ್ನಿತರ ಬೆಳೆಗಳು ನೀರು ಪಾಲಾಗಿವೆ. ಜೊತೆಗೆ ಜಿಲ್ಲೆಯ ಚಿಂಚೋಳಿ, ಕಾಳಗಿ, ಕಮಲಾಪುರ, ಅಫಜಲಪುರ್ ತಾಲೂಕುಗಳಲ್ಲಿ ಅತೀ ಹೆಚ್ಚು ಬೆಳೆ ಹಾನಿಯಾಗಿದೆ. ಆದರೆ ಬೆಳೆ ಹಾನಿ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸರ್ವೇ ಮಾಡಿಲ್ಲ ಹಾಗೂ ಕಳೆದ ಬಾರಿಯ ಪ್ರವಾಹದಿಂದಾದ ನಷ್ಟಕ್ಕೆ ಬರಬೇಕಾಗಿದ್ದ ಪರಿಹಾರ ಹಣವೂ ಕೂಡ ಬಂದಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೆ ಪ್ರವಾಹದಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ರಾಜ್ಯ ಸರ್ಕಾರ ಕೂಡಲೆ ಸಮರ್ಪಕ ರೀತಿಯಲ್ಲಿ ಸರ್ವೇ ಮಾಡಿ ನಷ್ಟದಲ್ಲಿರುವ ಅನ್ನದಾತರಿಗೆ ಪರಿಹಾರ ಕಲ್ಪಿಸಿಕೊಡಬೇಕೆಂಬ ಕೂಗು ಸಹ ಕೇಳಿಬರುತ್ತಿದೆ. ಇದನ್ನೂ ಓದಿ: ಮನೆಯಿಂದ ಮಳೆ ನೀರು ಹೊರ ಹಾಕುವ ವೇಳೆ ಕರೆಂಟ್ ಶಾಕ್ – ವ್ಯಕ್ತಿ ದುರ್ಮರಣ
Advertisement
Advertisement
ಬೆಳಗಾವಿಯಲ್ಲಿ ಭಾರೀ ಅನಾಹುತ ಒಂದು ಜಸ್ಟ್ ಮಿಸ್ ಆಗಿದೆ. ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಮನೆ ಕುಸಿದು ಬಿದ್ದಿದ್ದು, 8 ಮಂದಿ ಜಸ್ಟ್ ಮಿಸ್ ಆಗಿದ್ದಾರೆ. ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ಮನೆ ಕುಸಿದು ಬಿದ್ದಿದೆ. ಛಾವಣಿ ಸಪ್ಪಳಕ್ಕೆ ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ. ಕುಟುಂಬಸ್ಥರು ಹೊರಗೆ ಓಡಿ ಬರ್ತಿದ್ದಂತೆ ಮನೆ ಕುಸಿದು ಬಿದ್ದಿದೆ. ಇನ್ನು ದಾವಣಗೆರೆಯಲ್ಲಿ ಭಾರೀ ಮಳೆಗೆ 4 ಮನೆಗಳು ಕುಸಿದಿವೆ. ಹರಿಹರ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ ಮನೆಗಳು ಕುಸಿತವಾಗಿದ್ರೆ, ಗ್ರಾಮದ ದಲಿತ ಕಾಲೋನಿ ಸಂಪೂರ್ಣ ಮಳೆ ನೀರಿನಿಂದ ಆವೃತವಾಗಿತ್ತು. ಪರಿಣಾಮ ಜನ ಶಾಲೆಯಲ್ಲಿ ಆಶ್ರಯ ಪಡೆಯುವಂತಾಯ್ತು. ಇದನ್ನೂ ಓದಿ: ಏರ್‌ಪೋರ್ಟ್ ಟರ್ಮಿನಲ್‍ಗೆ ನುಗ್ಗಿದ ಮಳೆ ನೀರು – ಟ್ರಾಫಿಕ್‍ನಲ್ಲಿ ಹೈರಾಣಾದ ಪ್ರಯಾಣಿಕರು
Advertisement
ಮಂಡ್ಯ ಜಿಲ್ಲೆಯಾದ್ಯಂತ ಮುಂದುರೆದ ವರುಣನ ಆರ್ಭಟ ಮುಂದುವರೆದಿದೆ. ಭಾರೀ ಮಳೆಗೆ ಬೀದಿ-ಬದಿ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಆಯುಧ ಪೂಜೆ ಹಿನ್ನೆಲೆ ಬಂದಿದ್ದ ಬೂದು ಕುಂಬಳಕಾಯಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಧಾರವಾಡದಲ್ಲೂ ವರುಣ ಅಬ್ಬರಿಸಿದ್ದಾನೆ. ಅಳ್ನಾವರ ತಾಲೂಕಿನ ಧಾರಾಕಾರ ಮಳೆಯಿಂದಾಗಿ ಕಂಬಾರಗಣವಿ ಹಳ್ಳ ತುಂಬಿ ಹರಿಯುತ್ತಿದೆ. ಪರಿಣಾಮ ಅಳ್ನಾವರ ತಾಲೂಕಿನ ಕಂಬಾರಗಣವಿ ಮತ್ತು ಅರವಟಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಇನ್ನು ಚಿಕ್ಕೋಡಿ ಹಾಗೂ ಹುಕ್ಕೇರಿ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ. ಚಿಕ್ಕೋಡಿ ತಾಲೂಕಿನ ವಡ್ರಾಳ ಕೆರೆ ತುಂಬಿ ಹರಿದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿತ್ತು.
ಭಾರೀ ಮಳೆಯಿಂದಾಗಿ ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿ ಬಳಿಯ ಜರಮಡುಗು ಜಲಪಾತ ಮೈದುಂಬಿ ಹರಿಯುತ್ತಿದೆ. ಜಲಪಾತವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರ ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಬೆಟ್ಟ ಗುಡ್ಡದ ಮಧ್ಯೆ ಜಲಾಶಯ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರು ಜಾರಿ ಬೀಳುವ ಆತಂಕ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜರಮಡುಗು ಜಲಾಶಯದ ಬಳಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರನ್ನ ನಿಯೋಜಿಸಲಾಗಿದೆ. 2 ಪಾಳಿಯಲ್ಲಿ ಜಲಪಾತದ ಬಲಿ ಇಬ್ಬರು ಪೊಲೀಸರನು ನಿಯೋಜಿಸಲಾಗಿದ್ದು, ಪ್ರವಾಸಿಗರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಇದರಿಂದ ಜಲಪಾತ ಕಣ್ತುಂಬಿಕೊಳ್ಳಲು ಬಂದ ಜನರು ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ. ಜೊತೆಗೆ ಪ್ರವಾಸಿಗರು ನೀರು ನೋಡಿ ಖುಷಿ ಪಡಿ, ಆದರೆ ಜೀವಗಳ ಜೊತೆ ಚೆಲ್ಲಾಟ ಆಡಲು ಹೋಗಬೇಡಿ ಅಂತ ಪೊಲೀಸ್ ಇಲಾಖೆ ಮನವಿ ಮಾಡುತ್ತಿದೆ.