ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಕರಾವಳಿ ಭಾಗದ ಕುಮಟ ತಾಲೂಕಿನ ಕೂಜಳ್ಳಿ, ಕೋನಳ್ಳಿ ಗ್ರಾಮ ಬಹುತೇಕ ಜಲಾವೃತವಾಗಿದ್ದು, ಕುಮಟ ತಾಲೂಕಿನ ಬಡಗಣಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಪ್ರವಾಹದ ಭೀತಿ ಎದುರಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.
Advertisement
Advertisement
ಹೆಚ್ಚಿನ ಮಳೆಯಾದಲ್ಲಿ ಮೂರಕ್ಕೂ ಹೆಚ್ಚು ಗ್ರಾಮಗಳು ಮುಳುಗುವ ಸಾಧ್ಯತೆ ಇದೆ. ಹೀಗಾಗಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಸೂಚಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನದಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಹೈ ಅಲರ್ಟ್ ಘೋಷಣೆ ಮಾಡಿದೆ.
Advertisement
ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ರೇಡ್ ಅಲರ್ಟ್ ನಡುವೆ ತಲಕಾವೇರಿ ಭಾಗಮಂಡಲದಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಭಗಂಡೇಶ್ವರ ದೇವಾಲಯಕ್ಕೆ ಉಡುಪಿಯ ಪೇಜಾವರ ಮಠಾದೀಶ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಭೇಟಿ ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತ ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆ ಸಹಿತ ಚಳಿ ಇದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಎನ್‍ಡಿಆರ್‍ಎಫ್ ತಂಡವು ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.
Advertisement
ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಮುಂಗಾರು ಮಳೆ ನಿರಂತರವಾಗಿ ಸುರಿಯುತ್ತಿದೆ. ಈ 24 ಗಂಟೆಯಲ್ಲಿ 135 ಮಿಲಿ ಮೀಟರ್ ಮಳೆ ಬಿದ್ದಿದೆ. ಕುಂದಾಪುರ ತಾಲೂಕಲ್ಲಿ ಅತೀ ಹೆಚ್ಚು 155 ಮಿಲಿಮೀಟರ್ ಮಳೆಯಾಗಿದೆ. ಉಡುಪಿಯಲ್ಲಿ 130, ಕಾರ್ಕಳದಲ್ಲಿ 90 ಮಿಲಿಮೀಟರ್ ಮಳೆಯಾಗಿದೆ. ಕಳೆದ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಉಡುಪಿ ನಗರದ ಕಲ್ಸಂಕ- ಬನ್ನಂಜೆ ವ್ಯಾಪ್ತಿಯ ಹತ್ತಾರು ಮನೆಗಳಿಗೆ ಕೃತಕ ನೆರೆ ನೀರು ನುಗ್ಗಿದೆ.
ಬೈಲಕೆರೆಯ ಸುಮಾರು 15 ಮನೆಗಳಿಗೆ ಕಾಲುವೆಯ ನೀರು ನುಗ್ಗಿದೆ. ಮೂಡನಿಡಂಬೂರು ವ್ಯಾಪ್ತಿಯಲ್ಲಿ ಕಾಲುವೆ ಉಕ್ಕಿ ಹರಿದಿದೆ. ಗದ್ದೆಗಳೆಲ್ಲ ಜಲಾವೃತವಾಗಿದೆ. ಮಳೆ ನೀರು ರಸ್ತೆಯಲ್ಲೆಲ್ಲ ಹರಿದಿದ್ದು ವಾಹನ ಸಂಚಾರ ಮತ್ತು ಪಾದಾಚಾರಿಗಳಿಗೆ ಸಮಸ್ಯೆಯಾಗಿತ್ತು. ಅಂಬಾಗಿಲು ರಸ್ತೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಕೆಲಮನೆಗಳಿಗೆ ಜಲ ದಿಗ್ಭಂಧನವಾಗಿದೆ. ಐದು ದಿನಗಳಲ್ಲಿ ಜಿಲ್ಲೆಯಲ್ಲಿ 500 ಮಿಲಿಮೀಟರ್ ಮಳೆಯಾಗಿದ್ದು, ಮುಂಗಾರು ಪ್ರಬಲವಾಗಿರುವುದಕ್ಕೆ ಪ್ರೌಢಶಾಲೆಯವರೆಗೆ ಡಿಸಿ ರಜೆ ಘೋಷಣೆ ಮಾಡಿದ್ದರು. ಇಂದು ವಿಪರೀತ ಮಳೆಯಾಗಿದ್ದರಿಂದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರ ಒತ್ತಡಕ್ಕೆ ಮಣಿದು ಡಿಗ್ರಿ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿದ್ದಾರೆ.
ಹವಾಮಾನ ಇಲಾಖೆ ಅಂದಾಜಿನ ಪ್ರಕಾರ, ಇನ್ನೂ ಎರಡು ದಿನ ಮಳೆಯಾಗಲಿದ್ದು, ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲಿ ಸಜ್ಜಾಗಿದೆ. ಇದೇ ವೇಳೆ ಮಂಗಳೂರು – ಬೆಂಗಳೂರು ಸಂಚರಿಸುವ ಎಲ್ಲ ರೀತಿಯ ರೈಲುಗಳನ್ನು ಸಂಪೂರ್ಣ ರದ್ದುಪಡಿಸಲಾಗಿದೆ. ಕೇರಳದ ಕಣ್ಣೂರು ಮತ್ತು ಕಾರವಾರದಿಂದ ಬೆಂಗಳೂರಿಗೆ ಹೋಗುವ ರೈಲು ಸೇವೆಯನ್ನು ಮಂಗಳೂರಿನವರೆಗೆ ಮಾತ್ರ ನಡೆಸಲಾಗುತ್ತಿದೆ. ಇದರಿಂದ ರೈಲು ಪ್ರಯಾಣಿಕರು ಸಂಕಷ್ಟ ಪಡುವಂತಾಗಿದೆ.