ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಸೋಮವಾರ ಉತ್ತರ ಕರ್ನಾಟಕ ಭಾಗದ ಹಲವೆಡೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಬೆಳಗಾವಿಯಲ್ಲಿ ಗಾಳಿ ಸಹಿತ ಜೋರು ಮಳೆಯಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ಹತ್ತುಕ್ಕೂ ಹೆಚ್ಚು ಮನೆಗಳ ಗೋಡೆ ಕುಸಿದಿದ್ದು, ಮೇಲ್ಛಾವಣಿ ಹಾರಿ ಹೋಗಿವೆ. ಚಿತ್ರದುರ್ಗದ ಚಳ್ಳಕೆರೆಯಲ್ಲೂ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ರಸ್ತೆಗಳು ಜಲಾವೃತವಾಗಿದೆ.
Advertisement
Advertisement
ಇನ್ನು ರಾಮನಗರದಲ್ಲೂ ಜೋರು ಮಳೆಯಾಗಿದ್ದು, ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತವಾಗಿತ್ತು. ಇದರಿಂದ ವಾಹನ ಸವಾರರು ಪರದಾಡಿದ್ದಾರೆ. ಮಳೆಯಿಲ್ಲದೆ ಬಳಲಿ ಬೆಂಡಾಗಿದ್ದ ಚಿಕ್ಕಬಳ್ಳಾಪುರದಲ್ಲೂ ವರುಣ ಅಬ್ಬರಿಸಿದ್ದು, ರೈತರು ಫುಲ್ ಖುಷಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಭಾರೀ ಮಳೆಯಾಗುತ್ತೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Advertisement
ಸೋಮವಾರ ಸುರಿದ ಬಾರೀ ಮಳೆಗೆ ಗದಗದಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಮಲ್ಲವ್ವ ಜಲಾಲ್ (56) ಮೃತ ದುರ್ದೈವಿ. ಮಲ್ಲವ್ವ ರಾತ್ರಿ ಮಲಗಿದ್ದ ವೇಳೆ ಮನೆಗೋಡೆ ಕುಸಿದು ಮೃತಪಟ್ಟಿದ್ದಾರೆ.
Advertisement
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಲವೆಡೆ ಧಾರಾಕಾರ ಮಳೆ ಸುರಿದು ತಾಲೂಕಿನ ಮೋಡಚಿ ಹಳ್ಳದಲ್ಲಿ ಟ್ರ್ಯಾಕ್ಟರ್ ತೇಲಿಹೋದ ಘಟನೆ ನಡೆದಿದೆ. ಜಮೀನಿನಿಂದ ನೀಲಗಿರಿ ಕುಟುಂಬದವರು ಹಳ್ಳ ದಾಟಿಕೊಂಡು ಮನೆಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಟ್ರ್ಯಾಕ್ಟರ್ ನಲ್ಲಿದ್ದ ಫಕ್ಕೀರಪ್ಪ, ಹನುಮಂತ, ಗೂಳಪ್ಪ ಮತ್ತು ಜಯಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆ ನಿಂತ ಮೇಲೆ ಸ್ಥಳೀಯರು ಜೆಸಿಬಿಯಿಂದ ಟ್ರ್ಯಾಕ್ಟರ್ ಮೇಲೆತ್ತಿದ್ದಾರೆ.
ಇತ್ತ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಣ್ಣಿ ಹಳ್ಳದಲ್ಲಿ ಟ್ರ್ಯಾಕ್ಟರ್ ಸಂಪೂರ್ಣ ಮುಳುಗಿ ಹೋಗಿದ್ದು, ರೈತ ಹಳ್ಳದಲ್ಲಿ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಣ್ಣೆ ಹಳ್ಳ ತುಂಬಿ ಸೇತುವೆ ಮೇಲೆ ನೀರು ಹರಿಯುತ್ತಿದ್ದ ಸಮಯದಲ್ಲಿ ನೀರಿನ ಆಳ ಅರಿಯದೇ ಹಳ್ಳ ದಾಟಿಸಲು ರೈತ ಮುಂದಾಗಿದ್ದಾರೆ. ಪರಿಣಾಮ ನೀರಲ್ಲಿ ಟ್ರ್ಯಾಕ್ಟರ್ ಸಂಪೂರ್ಣವಾಗಿ ಮುಳುಗಿದೆ. ಇತ್ತ ಶಾಲೆ, ಮನೆ, ಅಂಗಡಿ, ಬಸ್ ನಿಲ್ದಾಣಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.