Friday, 20th July 2018

Recent News

ರಾಜ್ಯದೆಲ್ಲೆಡೆ ಬಿರುಗಾಳಿ ಸಹಿತ ಭಾರೀ ಮಳೆ – ಸಿಡಿಲು ಬಡಿದು ಮೂವರ ದುರ್ಮರಣ

ಬೆಂಗಳೂರು: ಬಿಸಿಲಿನ ಜಳಕ್ಕೆ ಬಳಲಿ ಬೆಂಡಾಗಿದ್ದ ಸಿಲಿಕಾನ್ ಮಂದಿಗೆ ವರುಣ ತಂಪೆರೆದಿದ್ದಾನೆ. ಸಿಲಿಕಾನ್ ಸಿಟಿ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ದಿಢೀರ್ ಸುರಿದ ಮಳೆಗೆ ವಾಹನ ಸವಾರರು ಪರದಾಡಿದ್ದಾರೆ.

ನಗರದ ಸದಾಶಿವನಗರ, ಯಶವಂತಪುರ, ರಾಜಾಜಿನಗರ, ಮೆಜೆಸ್ಟಿಕ್ ,ಮೈಸೂರು ರೋಡ್, ಎಮ್ ಜಿ ರೋಡ್ ಸೇರಿದಂತೆ ಹಲವೆಡೆ ಮಳೆಯಾಗಿದೆ. ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಮೇಲ್ಮೈ ಸುಳಿಗಾಳಿಯ ಹಿನ್ನೆಲೆಯಲ್ಲಿ ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.

ಮಲ್ಲೇಶ್ವರಂನಲ್ಲಿ ಸುರಿದ ಮಳೆಗೆ ಮರ ಧರೆಗುರುಳಿದೆ. ಆರ್‍ಎಂವಿಯಲ್ಲಿ ಮರ ಬಿದ್ದು, ಒಂದು ಕಾರು ಜಖಂ ಆಗಿದೆ. ಕಾರು ಚಾಲಕನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೋರುಗುಂಟೆ ಪಾಳ್ಯ, ಮಹಾಲಕ್ಷ್ಮಿ ಲೇಔಟ್, ಕುಳ್ಳಪ್ಪ ಸರ್ಕಲ್, ಎಂಸ್ ರಾಮಯ್ಯ ಆಸ್ಪತ್ರೆ ಮತ್ತು ಜಾಲಹಳ್ಳಿ ಬಳಿ 40ಕ್ಕೂ ಹೆಚ್ಚು ಮರಗಳು ಉರುಳಿಬಿದ್ದಿವೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು.

ದಾವಣಗೆರೆಯಲ್ಲಿ ಸೋಮವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದಾರೆ. ಹರಪನಹಳ್ಳಿ ತಾಲೂಕಿನ ಹುಣಸೆಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಮೇಕೆ ಮೇಯಿಸುತ್ತಿದ್ದ ಯುವಕ, 11 ಮೇಕೆಗಳು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿವೆ.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಕಣದಲ್ಲಿ ಮೆಕ್ಕೆಜೋಳದ ರಾಶಿ ಮಾಡುವಾಗ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹನುಮನಹಳ್ಳಿ ಗ್ರಾಮದ ಕಿರಣ್ ಕುಮಾರ್ ಹಾಗೂ ಲೋಕೇಶ್ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಓರ್ವ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರದಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆಯಾಗುತ್ತಿದ್ದಂತೆ ಮಳೆ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆಗಳಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *