ಬೆಂಗಳೂರು: ರಾಜ್ಯಾದ್ಯಂತ ವರುಣನ ಅಬ್ಬರ ಮುಂದುವರಿದಿದೆ. ಕೊಡಗಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಭಾಗಮಂಡಲ ದ್ವೀಪದಂತಾಗಿದೆ. ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ಇಂದು ಸಹ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಚಿಕ್ಕಮಗಳೂರಿನಲ್ಲೂ ಭಾರೀ ಮಳೆಯಾಗ್ತಿದ್ದು, ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕಳಸಾ-ಹೊರನಾಡು ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ನೀರಿನ ಪ್ರಮಾಣ ಹೆಚ್ಚಾಗ್ತಿದ್ದು ಸಂಚಾರ ಸ್ಥಗಿತಗೊಂಡಿದೆ.
Advertisement
ಹಾಸನ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಹೇಮಾವತಿ ಭರ್ತಿಗೆ ಇನ್ನು 9 ಅಡಿ ಮಾತ್ರ ಬಾಕಿ ಇದೆ. ಕಬಿನಿ ಜಲಾಶಯದ ಒಳಹರಿವು, ಹೊರಹರಿವು 50,000 ಕ್ಯೂಸೆಕ್‍ಗೆ ಹೆಚ್ಚಳವಾಗಿದೆ. ಕೆಆರ್ ಎಸ್ ಭರ್ತಿಗೆ ಇನ್ನು 8 ಅಡಿ ಬಾಕಿಯಿದೆ.
Advertisement
ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಉಕ್ಕಿ ಹರಿಯುತ್ತಿದೆ. ಅತ್ತ, ಕೃಷ್ಣಾ ಮತ್ತು ಉಪನದಿಗಳು ಉಕ್ಕಿ ಹರಿಯುತ್ತಿದ್ದು, ಹಿಪ್ಪರಗಿ ಜಲಾಶಯದಿಂದ ನೀರು ಹೊರಬಿಟ್ಟಿದ್ದರಿಂದ ಕಾರದಗಾ-ಭೋಜ, ದತ್ತವಾಡ-ಮಲಿಕವಾಡ, ಕಲ್ಲೋಳ- ಯಡೂರು ಸೇತುವೆಗಳು ಜಲಾವೃತಗೊಂಡಿವೆ.