ಕೋಲ್ಕತ್ತಾ: ರಾಜ್ಯದ ಕೆಲ ಭಾಗಗಳಲ್ಲಿ ತಾಪಮಾನ ಹಾಗು ಉಷ್ಣ ಹವೆ ಮುಂದುವರಿದಿದ್ದು, ಪಶ್ಚಿಮ ಬಂಗಾಳ ಸರ್ಕಾರ ಪ್ರಾಥಮಿಕ ಶಾಲೆಗಳ ರಜೆಯನ್ನು ವಿಸ್ತರಿಸಿದೆ.
ಕೋಲ್ಕತ್ತಾ ಹಾಗೂ ಪಶ್ಚಿಮ ಬಂಗಾಳದ ದಕ್ಷಿಣ ಭಾಗಗಳಲ್ಲಿ ಒಣ ಹವೆ ಹೆಚ್ಚಾಗುತ್ತಿದೆ. ಹೀಗಾಗಿ ಪ್ರಾಥಮಿಕ ಶಿಕ್ಷಣ ಮಂತ್ರಿ ಪಾರ್ಥ ಚಟರ್ಜಿ ಸೋಮವಾರ ಪ್ರಾಥಮಿಕ ಶಾಲಾ ಬೇಸಿಗೆ ರಜೆಯನ್ನು ಜೂನ್20 ರಿಂದ 30ಕ್ಕೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಉಷ್ಣ ಹವೆ ಬೀಸುತ್ತಿದ್ದ ಪರಿಣಾಮ ಜನರಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. 40.6ಡಿಗ್ರಿ ಯಷ್ಟು ಗರಿಷ್ಠ ಉಷ್ಣತೆ ದಾಖಲಾಗಿದ್ದು, ಕನಿಷ್ಠ 30 ಡಿಗ್ರಿ ದಾಖಲಾಗಿದೆ ಅಂತಾ ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ.
ಸರ್ಕಾರಿ ಶಾಲೆಗಳು ಜೂನ್ 20 ಕ್ಕೆ ಪ್ರಾರಂಭವಾಗಬೇಕಿತ್ತು. ಆದರೆ ತಾಪಮಾನ ಹೆಚ್ಚಾಗಿರುವ ಕಾರಣದಿಂದಾಗಿ ಜೂನ್ 30ಕ್ಕೆ ಮುಂದೂಡಲಾಗಿದೆ. ಖಾಸಗಿ ಪ್ರಾಥಮಿಕ ಶಾಲೆಗಳು ಕೂಡಾ ರಜೆಯನ್ನು ವಿಸ್ತರಿಸುವಂತೆ ಸಚಿವ ಪಾರ್ಥ ಚಟರ್ಜಿ ವಿನಂತಿ ಮಾಡಿದ್ದಾರೆ.
ಕೋಲ್ಕತ್ತಾ ಹಾಗು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಈ ಬಿಸಿ ಹಬೆ ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ. ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು, ಇನ್ನೆರಡು ದಿನಗಳ ಕಾಲ ಪಶ್ಚಿಮ ಬಂಗಾಳದ ಗಂಗಾಟಿಕ್ ಜಿಲ್ಲೆಗಳಲ್ಲಿ ಈ ರೀತಿ ವ್ಯತಿರಿಕ್ತ ಹವಾಮಾನ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.