ಬಳ್ಳಾರಿ: ತಾಯಿ ಹಸುವಿನ ಜೊತೆ ಮೇಯಲು ಹೋಗಿದ್ದ ಕರುವಿನ ಮೇಲೆ ಟಾಟಾ ಸುಮೋ ವಾಹನವೊಂದು ಹರಿದು ಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಹೊಸಪೇಟೆ ನಗರದ ಬೈಪಾಸ್ ರಸ್ತೆಯ ಸಿದ್ದಿಪ್ರಿಯಾ ಕಲ್ಯಾಣ ಮಂಟಪದ ಬಳಿ ಇಂದು ಮುಂಜಾನೆ ನಡೆದ ಅಪಘಾತದಲ್ಲಿ ಕರು ಮೃತಪಟ್ಟಿತ್ತು. ತನ್ನ ಕರುಳ ಕುಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ ತಾಯಿ ಹಸು, ಕರುವನ್ನು ಎಬ್ಬಿಸುವ ಪ್ರಯತ್ನ ಮಾಡಿದ ದೃಶ್ಯ ಎಂತವರಿಗೂ ಕರುಳು ಕಿವುಚುವಂತಿತ್ತು.
ಅಪಘಾತದಲ್ಲಿ ಕರು ಸ್ಥಳದಲ್ಲೇ ಮೃತಪಟ್ಟ ನಂತರ ತಾಯಿ ಹಸು ಕರುವನ್ನು ಎಬ್ಬಿಸಲು ಸಾಕಷ್ಟು ಪ್ರಯತ್ನಪಟ್ಟಿತು. ಅಲ್ಲದೇ ಬೇರೆಯವರು ಸಹ ಕರುವಿನ ಬಳಿ ಬರದಂತೆ ಕೆಲ ಕಾಲ ಚೀರಾಟ ನಡೆಸಿ ಮೂಕರೋಧನೆ ಇಟ್ಟ ದೃಶ್ಯ ನೋಡುಗರ ಮನಕಲಕುವಂತೆ ಮಾಡಿತು.