ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇಂದು ಸಂಜೆ ಅವರು ದೆಹಲಿಯತ್ತ ಪ್ರಯಾಣವನ್ನು ಬೆಳಸಲಿದ್ದಾರೆ.
ಸಕ್ಕರೆ ಕಾಯಿಲೆ, ಕಫ, ಬೊಜ್ಜು ಸಮಸ್ಯೆ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಅವರು, ಪಂಜಾಬ್ ಚುನಾವಣೆಯ ನಂತರ ಫೆಬ್ರವರಿ 7 ರಂದು ನಗರದ ನೆಲಮಂಗಲದ ಚಿಕ್ಕ ಬಿದರಕಲ್ಲಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಆಗಮಿಸಿದ್ದರು.
ಪ್ರತಿನಿತ್ಯ ಚಿಕಿತ್ಸೆ ವೇಳೆಯಲ್ಲಿ ಬೆಳಗ್ಗೆ ಬೇಗನೆ ಎದ್ದು ವ್ಯಾಯಾಮ, ಪ್ರಾಣಾಯಾಮ, ಯೋಗ, ವಿವಿಧ ಬಗೆಯ ಪ್ರಕೃತಿ ಚಿಕಿತ್ಸೆ, ಮಡ್ ತೆರಫಿ, ಮಡ್ ಪ್ಯಾಕ್, ವಾಟರ್ ತೆರಫಿ, ಯೋಗ ನಿದ್ರಾ, ಅಧಿಕ ವ್ಯಾಯಾಮ ಹಾಗೂ ವೈದ್ಯರ ಸಲಹೆಯಂತೆ ಇನ್ನಿತರ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.
2015 ರಲ್ಲಿ ಪ್ರಥಮ ಬಾರಿಗೆ ದೆಹಲಿ ಚುನಾವಣೆಯ ನಂತರ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು. 2016 ರ ಜನವರಿಯಲ್ಲಿ ಮತ್ತೊಮ್ಮೆ ಆಗಮಿಸಿ ತಪಾಸಣೆ ಮಾಡಿಸಿಕೊಂಡಿದ್ದರು. ಈ ಬಾರಿ ಒಟ್ಟು 15 ದಿನಗಳ ಕಾಲ ದೀರ್ಘಕಾಲ ಉಳಿದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಓರ್ವ ಮುಖ್ಯಮಂತ್ರಿಯಾಗಿದ್ದರೂ ಸಹ ಸಾಮಾನ್ಯ ರೋಗಿಯಾಗಿ ಚಿಕಿತ್ಸಗೆ ಸ್ಪಂದಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯೆ ಡಾ.ಬಬಿನಾ ತಿಳಿಸಿದ್ದಾರೆ.