ಕ್ರೈಸ್ಟ್ಚರ್ಚ್: ಭಾರತ ಟಿ20 ತಂಡದ ಆರಂಭಿಕರಾದ ಅಭಿಷೇಕ್ ಶರ್ಮಾ(Abhishek Sharma) ಮತ್ತು ಸಂಜು ಸ್ಯಾಮ್ಸನ್(Sanju Samson) ನಿರಂತರವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ, ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ(Vaibhav Sooryavanshi) ತಮ್ಮ ಅವಕಾಶಕ್ಕಾಗಿ ಕಾಯಲೇಬೇಕಾಗುತ್ತದೆ ಎಂದು ನಾಯಕ ಶ್ರೇಯಸ್ ಅಯ್ಯರ್(Shreyas Iyer) ಸ್ಪಷ್ಟಪಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ಮಾತನಾಡಿದ ಅಯ್ಯರ್, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ಪ್ರಸ್ತುತ ಇರುವ ಆರಂಭಿಕ ಆಟಗಾರರು ಸ್ಥಿರವಾಗಿ ರನ್ ಗಳಿಸುತ್ತಿರುವಾಗ, ಯುವ ಆಟಗಾರ ನೇರವಾಗಿ ಪ್ಲೇಯಿಂಗ್ ಇಲೆವೆನ್ಗೆ ಬರಲು ಸಾಧ್ಯವಿಲ್ಲ ಎಂದಿದ್ದಾರೆ.
ವೈಭವ್ ಅವರಂತಹ ಪ್ರತಿಭಾನ್ವಿತ ಆಟಗಾರ ಡ್ರೆಸ್ಸಿಂಗ್ ರೂಮ್ನಲ್ಲಿ ಯಾವಾಗಲೂ ಖುಷಿಯಾಗಿರುವುದು ಬಹಳ ಮುಖ್ಯ. ಆತ ಇನ್ನೂ ತುಂಬ ಚಿಕ್ಕ ವಯಸ್ಸಿನವನು, ಮುಂದೆ ಅವಕಾಶಗಳನ್ನು ಪಡೆಯಲು ಆತನಿಗೆ ಸಾಕಷ್ಟು ವರ್ಷಗಳ ಸಮಯವಿದೆ. ನಮ್ಮ ಆರಂಭಿಕ ಬ್ಯಾಟರ್ಗಳು ನಿರಂತರವಾಗಿ ರನ್ ಗಳಿಸುತ್ತಿದ್ದಾರೆ ಮತ್ತು ಅವರು ವಿಶ್ವಕಪ್ ಗೆದ್ದು ಕೊಟ್ಟಿದ್ದಾರೆ. ಹಾಗಾಗಿ ಆತ ನೇರವಾಗಿ ತಂಡದೊಳಗೆ ಬಂದು ಆಡಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಅಯ್ಯರ್ ತಿಳಿಸಿದರು.
ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಸೂರ್ಯವಂಶಿ, ಭಾರತ ಆಡಿದ 21 ಟಿ20 ಪಂದ್ಯಗಳ ಪೈಕಿ ಕೇವಲ 8 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದಾರೆ. ಭಾರತ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದ್ದರಿಂದ, ಅಗ್ರ ಕ್ರಮಾಂಕದಲ್ಲಿ ಅವರ ಸ್ಥಾನಗಳು ಮತ್ತಷ್ಟು ಭದ್ರವಾಗಿವೆ.
ಏಷ್ಯನ್ ಗೇಮ್ಸ್ ವೇಳೆ ಸಂಜು ಸ್ಯಾಮ್ಸನ್ 3ನೇ ಕ್ರಮಾಂಕಕ್ಕೆ ಇಳಿದು, ವೈಭವ್ಗೆ ಇನ್ನಿಂಗ್ಸ್ ಆರಂಭಿಸಲು ಅವಕಾಶ ಮಾಡಿಕೊಡಲಾಗಿತ್ತು. ಅಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ವೈಭವ್ 176.66 ಸ್ಟ್ರೈಕ್ ರೇಟ್ನಲ್ಲಿ 53 ರನ್ ಸಿಡಿಸಿ ತಮ್ಮ ಸ್ಫೋಟಕ ಆಟದ ಝಲಕ್ ತೋರಿಸಿದ್ದರು. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಸಂಪೂರ್ಣ ಟಿ20 ಸರಣಿಯಲ್ಲಿ ಅವರಿಗೆ ಬೆಂಚ್ ಕಾಯಬೇಕಾಯಿತು.
ಈ ಬಗ್ಗೆ ಮಾತನಾಡಿದ ಅಯ್ಯರ್, ನಮ್ಮ ಪ್ರಕ್ರಿಯೆಯಲ್ಲಿ ಸ್ಥಿರತೆ ಕಾಯ್ದುಕೊಂಡರೆ ಖಂಡಿತ ಅವಕಾಶ ಸಿಗುತ್ತದೆ, ಕೆಲವೊಮ್ಮೆ ಕಾಯುವುದು ಅನಿವಾರ್ಯ ಎಂಬುದನ್ನು ನಾನು ಸದಾ ವೈಭವ್ಗೆ ಹೇಳುತ್ತಿರುತ್ತೇನೆ. ನಮ್ಮಲ್ಲಿ ಇಬ್ಬರು ಉತ್ತಮ ಆರಂಭಿಕರಿದ್ದಾರೆ ಎಂಬುದೇ ಆತನೊಂದಿಗೆ ನಾವು ನಡೆಸುತ್ತಿರುವ ಮಾತುಕತೆ ಎಂದು ವಿವರಿಸಿದರು.
ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯ ಮಳೆಯಿಂದ ರದ್ದಾದ ನಂತರ ಮಾತನಾಡಿದ ಅಯ್ಯರ್, ಸರಣಿ 2-2ರಲ್ಲಿ ಸಮಬಲಗೊಂಡಿದ್ದಕ್ಕೆ ಪ್ರತಿಕ್ರಿಯಿಸುತ್ತಾ, ಎರಡನೇ ಮತ್ತು ನಾಲ್ಕನೇ ಪಂದ್ಯಗಳಲ್ಲಿ ಬೌಲಿಂಗ್ ಇನ್ನಷ್ಟು ಉತ್ತಮವಾಗಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು ಎಂದು ಒಪ್ಪಿಕೊಂಡರು. ಜತೆಗೆ ವಿಂಡೀಸ್ ನಾಯಕ ಶಾಯ್ ಹೋಪ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

