ಜೈಲಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪುಟ್ಟಣ್ಣಗೆ ಟಿಕೆಟ್ ನೀಡಿದ್ದು ಜೆಡಿಎಸ್ – ರೇವಣ್ಣ ವಾಗ್ದಾಳಿ

Public TV
2 Min Read
revanna puttanna

ಹಾಸನ: ಚನ್ನಪಟ್ಟಣದ ಜೈಲಿನಲ್ಲಿ ಚಡ್ಡಿ ಮೇಲೆ ನಿಲ್ಲಿಸಿದ್ದವರನ್ನು ಕರೆದು ಜೆಡಿಎಸ್‍ನಲ್ಲಿ ಸ್ಥಾನ ನೀಡಲಾಗಿತ್ತು. ಇವರಿಗಾಗಿ ದೇವೇಗೌಡರು ಪಾದಯಾತ್ರೆಯನ್ನು ಸಹ ಮಾಡಿದ್ದರು. ನೈತಿಕತೆ ಇದ್ದರೆ ಇವರು ಜೆಡಿಎಸ್‍ಗೆ ರಾಜೀನಾಮೆ ನೀಡಿ ಹೋಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು, ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಗಳನ್ನು ಸೋಲಿಸಿದ್ದು ಇವರೇ. ಗೌರವ, ನೈತಿಕತೆ ಇದ್ದರೆ ಅವರು ರಾಜೀನಾಮೆ ನೀಡಲಿ. ಎಂಎಲ್ಸಿ, ಉಪಸಭಾಪತಿ ಮಾಡಿದ್ದು ಯಾರು? ಆದರೆ ಇವರು ನಾಲ್ಕು ವರ್ಷದಿಂದ ಯಾರ ಜೊತೆಗೆ ಓಡಾಡುತ್ತಿದ್ದಾರೆ ಎಂದು ತಿಳಿದಿದೆ. ಜೆಡಿಎಸ್ ಹಂಗಿನಲ್ಲಿ ಹೊಟ್ಟೆ ಉರಿಯುತ್ತಿರುವ ಇಂತವರಿಗೆ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಜೆಡಿಎಸ್ ಬಿಡಲು ತೀರ್ಮಾನಿಸಿದ್ದೇನೆ, ಬಹುತೇಕ ಎಂಎಲ್‍ಸಿಗಳು ಸಹ ತೊರೆಯಲು ಚಿಂತಿಸಿದ್ದಾರೆ- ಪುಟ್ಟಣ್ಣ

DEVEGOWDA

ಚನ್ನಪಟ್ಟಣದ ಜೈಲಲ್ಲಿ ಚಡ್ಡಿಯಲ್ಲಿ ನಿಲ್ಲಿಸಿದವರಿಗೆ ದೇವೇಗೌಡರು ರಾಜಕೀಯ ಭವಿಷ್ಯ ನೀಡಿದರು. ಪುಟ್ಟಣ್ಣ ಅವರಿಂದ ಜೆಡಿಎಸ್‍ಗೆ ಏನೂ ಆಗಬೇಕಿಲ್ಲ. ಅವರು ಹೋದರೆ ಜೆಡಿಎಸ್ ಹಾಗೂ ದೇವೇಗೌಡರಿಗೆ ಶಾಕ್ ಆಗುವುದಿಲ್ಲ ಎಂದರು.

ಬಸವರಾಜ ಹೊರಟ್ಟಿ ನಮ್ಮ ಪಕ್ಷದ ಆಸ್ತಿ. ಪಕ್ಷದಲ್ಲಿ ಸಣ್ಣ ಪುಟ್ಟ ಗೊಂದಲಗಳಿರಬಹುದು. ಹೊರಟ್ಟಿ ಸೇರಿದಂತೆ ಇತರೆ ಪರಿಷತ್ ಸದಸ್ಯರ ಜೊತೆ ಚರ್ಚಿಸಿ ಮನವೊಲಿಸುತ್ತೇವೆ. ಸಣ್ಣಪುಟ್ಟ ಸಮಸ್ಯೆ ಇದ್ದರೆ ಕುಳಿತು ಬಗೆ ಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‍ನವರು ನಮ್ಮನ್ನು ಬಿಜೆಪಿಯ ಬಿ ಟೀಂ ಅಂದರು. ನಂತರ ಅವರೇ ನಮ್ಮ ಬಳಿ ಬಂದರು. ನಂತರ 14 ತಿಂಗಳು ಸರ್ಕಾರ ಮಾಡಿದೆವು. ಆ ಸಂದರ್ಭದಲ್ಲಿ ಅನುಭವಿಸಿದ ನೋವು ನಮಗೇ ಗೊತ್ತು. ನನ್ನನ್ನು ಸೂಪರ್ ಸಿಎಂ ಎಂದು ಬಿಂಬಿಸಿದರು. ಇದೀಗ ಕುಮಾರಸ್ವಾಮಿ-ಯಡಿಯೂರಪ್ಪ ನಡುವೆ ಒಳ ಒಪ್ಪಂದ ಆಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಿದ್ದಿದ್ದರೆ ಕೆಎಂಎಫ್ ಅಧ್ಯಕ್ಷ ಚುನಾವಣೆಯಲ್ಲಿ ಯಡಿಯೂರಪ್ಪ ಮನೆಗೆ ನಾನೇ ಹೋಗಿ ಕೇಳುತ್ತಿದ್ದೆ. ಆದರೆ ಯಡಿಯೂರಪ್ಪನವರ ಮನೆಗೆ ಯಾರು ಹೋಗಿದ್ದರು ಎಂಬುದನ್ನು ಅರಿಯಲಿ. ವಿಪಕ್ಷ ನಾಯಕರಾಗಿರುವವರು ಜಬಾಬ್ದಾರಿಯಿಂದ ಮಾತನಾಡಲಿ ಎಂದು ತಿರುಗೇಟು ನೀಡಿದರು.

SIDDARAMAIAH 1 e1572247378461

ಸಮ್ಮಿಶ್ರ ಸರ್ಕಾರ ಬೀಳಿಸುವ ತಪ್ಪನ್ನು ಕುಮಾರಸ್ವಾಮಿ ಏನು ಮಾಡಿದ್ದರು? 14 ಶಾಸಕರನ್ನು ಹಿಡಿದಿಡಲು ಆಗುತ್ತಿರಲಿಲ್ಲವೇ? ಅಭಿವೃದ್ಧಿ ವಿಚಾರದಲ್ಲಿ ಹಾಸನ ಜಿಲ್ಲೆಯ ಜನರನ್ನು ಎದುರು ಹಾಕಿಕೊಳ್ಳಬೇಡಿ. ವಿಪಕ್ಷ ನಾಯಕರು ಜೆಡಿಎಸ್ ಸಹವಾಸ ಸಾಕು ಎಂದಿದ್ದಾರೆ. ಆದರೆ ಸರ್ಕಾರ ರಚನೆ ವೇಳೆ ನಾವು ಅವರ ಬಳಿ ಹೋಗಿರಲಿಲ್ಲ. ಅವರೇ ನಮ್ಮ ಬಳಿ ಬಂದಿದ್ದರು ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಬಿಜೆಪಿಗೆ ಜೆಡಿಎಸ್ ಪಕ್ಷ ಬರೆದು ಕೊಡುತ್ತೇವೆ ಎಂದಿಲ್ಲ. ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುತ್ತೇವೆ ಎಂದೂ ಹೇಳಿಲ್ಲ. ನೆರೆ ಸಂತ್ರಸ್ತರ ಹಿತದೃಷ್ಟಿಯಿಂದ ಬಿಜೆಪಿ ಸರ್ಕಾರ ಮುಂದುವರಿಯಲಿ ಎಂದಿದ್ದಾರೆ ಎಂದು ಹೇಳುವ ಮೂಲಕ ಎಚ್‍ಡಿಕೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

HDK 2

ಬಿಜೆಪಿ ಸರ್ಕಾರ ಬಂದ ನಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತ ಆಗಿದೆ. ಕಾವೇರಿ ನೀರಾವರಿ ನಿಗಮದ 7 ಸಾವಿರ ಕೋಟಿ ರೂ. ಕೆಲಸವನ್ನು ನಿಲ್ಲಿಸಲಾಗಿದೆ. ಸಿಎಂ ಯಾವುದೇ ಕೆಲಸ ನಿಲ್ಲಿಸುವುದಿಲ್ಲ ಎಂದಿದ್ದರು. ಆದರೆ ಯಾವುದೇ ಕೆಲಸ ಆರಂಭ ಆಗಿಲ್ಲ. ಈ ಬಗ್ಗೆ ಮುಂದಿನ ವಾರ ನಮ್ಮ ಎಲ್ಲ ಶಾಸಕರು ಸೇರಿ ಸಿಎಂ ಭೇಟಿ ಮಾಡಿ ಕೇಳುತ್ತೇವೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *