Connect with us

Districts

ಜನರೇ ನನ್ನ ಅಡ್ರೆಸ್ ಏನು ಅಂತಾ ಮುಂದಿನ ದಿನಗಳಲ್ಲಿ ತೋರಿಸ್ತಾರೆ: ಎಚ್‍ಡಿಕೆ

Published

on

ರಾಮನಗರ: ನನ್ನ ಅಡ್ರೆಸ್ ಈಗ ಇಲ್ಲದಿರಬಹುದು. ಅವರೇ 2006ರಲ್ಲಿ ನನ್ನ ಅಡ್ರೆಸ್ ಹುಡುಕಿಕೊಂಡು ಬಂದವರು. ನಾನು ಅವರ ಅಡ್ರೆಸ್ ಹುಡುಕಿಕೊಂಡು ಹೋಗಿರಲಿಲ್ಲ.ಇವತ್ತು ನನಗೆ ಅಡ್ರೆಸ್ ಇಲ್ಲದಿರಬಹುದು ಜನರ ಮಧ್ಯೆ ನಾನಿದ್ದೇನೆ. ಇದೇ ಜನರೇ ನನ್ನ ಅಡ್ರೆಸ್ ಏನೂ ಅಂತಾ ಮುಂದಿನ ದಿನಗಳಲ್ಲಿ ತೋರಿಸ್ತಾರೆ ಎಂದು ಸಿಎಂ ಯಡಿಯೂರಪ್ಪನವರ ಟ್ವೀಟ್ ಗೆ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಚನ್ನಪಟ್ಟಣ ತಾಲೂಕಿನ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಶಂಕುಸ್ಥಾಪನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಭಾಗಿಯಾಗಿದ್ದರು. ಇದೇ ವೇಳೆ ಮಳೂರು ಪಟ್ಟಣದಲ್ಲಿ 5 ಕೋಟಿ ರೂ. ವೆಚ್ಚದ ಮೂರು ರಸ್ತೆಗಳ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯ ನೆರವೇರಿಸಿದರು.

ಇದೇ ವೇಳೆ ಮಂಗಳೂರು ಗಲಭೆ ವಿಚಾರವಾಗಿ ಮಾತನಾಡಿದ ಅವರು, ಕಲ್ಲು ತುಂಬಿಕೊಂಡು ಬರುವ ಗಾಡಿಯ ವಿಡಿಯೋ ಸತ್ಯವೋ, ಅಸತ್ಯವೋ ತನಿಖೆಯಾಗಲಿ. ಯಾರಾದ್ರೂ ಕಾನೂನು ಬಾಹಿರವಾಗಿ ಗಲಭೆಗೆ ಕಾರಣಕರ್ತರು ಇದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾದ್ದು ಸರ್ಕಾರದ ಕ್ರಮ. ಗಲಭೆ ನಡೆಸುವಂತವರಿಗೆ ಬೆಂಬಲ ಕೊಡಲು ನಾನಿಲ್ಲ ಎಂದು ತಿಳಿಸಿದರು. ಅಲ್ಲದೇ ವಿಡಿಯೋ ವೈರಲ್ ಬಗ್ಗೆ ಹಲವಾರು ರೀತಿಯ ಸಂಶಯಗಳಿವೆ. ಸಿಎಂ ಮತ್ತು ಪೊಲೀಸ್ ಕಮಿಷನರ್ ಒಂದೊಂದು ಕಾಂಟ್ರವರ್ಷಿಯಲ್ ಹೇಳಿಕೆ ನೀಡ್ತಿದ್ದಾರೆ. ಇವರ ತಪ್ಪುಗಳನ್ನು ಮುಚ್ಚಿಡಲು ಬೇರೆ ರೀತಿಯ ಹುನ್ನಾರ ನಡೆಸಿದ್ರೆ, ಅದನ್ನ ಕೇಳಿಕೊಂಡಿರಲು ನಾವು ಹೂವು ಮುಡಿದುಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ರಾಜ್ಯದಾದ್ಯಂತ ಪ್ರತಿಭಟನೆಗೆ ಮೊದಲು ಅವಕಾಶ ನೀಡಿ ಆನಂತರ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಇವರಿಗೆ ಗಲಭೆ ಆಗುತ್ತೆ ಅಂತಾ ಮಾಹಿತಿ ಕೊಟ್ಟವರು ಯಾರು? 14 ತಿಂಗಳ ಮೈತ್ರಿ ಆಡಳಿತದಲ್ಲಿ ಒಂದೇ ಒಂದು ಗಲಭೆಗೆ ಕರಾವಳಿಯಲ್ಲಿ ಅವಕಾಶ ನೀಡಿರಲಿಲ್ಲ. ಗಲಭೆ ಆರಂಭವಾಗಿದ್ದೇ ಪೊಲೀಸರಿಂದ ಅವರಿಗೆ ಆದೇಶ ಕೊಟ್ಟಿದ್ದು ಯಾರು? ಮಂಗಳೂರಿನಲ್ಲಿ ಮತ್ತೊಂದು ಪ್ಯಾರಲಲ್ ಸರ್ಕಾರ ನಡೆಸುತ್ತಿದೆ. ಅಲ್ಲಿನ ಪ್ರಭಾಕರ್ ಭಟ್ ಎಂಬವರ ಸೂಚನೆ ಮೇರೆಗೆ ಪೊಲೀಸರು ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದ್ರು. ಕೆಲಸ ಮಾಡಲು ಹೋಗಿದ್ದವ, ಮಕ್ಕಳನ್ನು ಶಾಲೆಯಿಂದ ಕರೆತಂದು ಇಣುಕಿ ನೋಡಿದವ ಪೊಲೀಸರ ಗುಂಡೇಟಿಗೆ ಬಲಿಯಾದ್ರು. ಮಾಜಿ ಮೇಯರ್ ಶಾಂತಿ ಸಭೆಗೆ ಕರೆದು ರಬ್ಬರ್ ಗುಂಡು ಹಾರಿಸಿ ಐಸಿಯುನಲ್ಲಿ ಮಲಗುವಂತೆ ಮಾಡಿದ್ದಾರೆ. ಇದು ಈ ಸರ್ಕಾರದ ಸಾಧನೆ ಎಂದು ತಿಳಿಸಿದ್ರು.

ತೇಜಸ್ವಿ ಸೂರ್ಯ ವಿರುದ್ಧ ಗರಂ: ಅವನ್ಯಾರೋ ಬೆಂಗಳೂರಿನ ಲೋಕಸಭಾ ಸದಸ್ಯ ಅಂತೇ, ಪಂಕ್ಚರ್ ಹಾಕುವವರು, ಎದೆ ಸೀಳಿದ್ರೆ ಎರಡಕ್ಷರ ಇಲ್ಲದವರು ಪ್ರತಿಭಟನೆ ಮಾಡ್ತಾರೆ. ನೋಡಿ ನಮ್ಮ ಜೊತೆ ಪ್ರತಿಭಟನೆ ಮಾಡಲು ಬಂದವರು ಸಾಫ್ಟ್ ವೇರ್ ಇಂಡಸ್ಟ್ರಿಯ ಕಾರ್ಪೋರೇಟ್ ಕಂಪನಿಯ ಜನ ಬಂದು ಕೂತಿದ್ದಾರೆ ಅಂತಾರೆ. ಆದ್ರೆ ಸ್ವಾಮಿ ಈ ದೇಶ ಆಳುತ್ತಿರುವವರು ಸರ್ಕಾರದ ಹಲವು ರಿಯಾಯಿತಿಗಳನ್ನ ಪಡೆದುಕೊಂಡು, ಬ್ಯಾಂಕ್‍ಗಳಲ್ಲಿ ದೊಡ್ಡಮಟ್ಟದ ಸಾಲ ಪಡೆದುಕೊಂಡು ದೇಶ ಬಿಟ್ಟು ಹೋಗುವಂತಹ ರೀತಿಯ ಕ್ರಿಮಿನಲ್‍ಗಳು ನಿಮ್ಮ ಜೊತೆ ಇರಬಹುದು. ಪ್ರತಿಭಟನೆ ಮಾಡ್ತಿರುವವರು ಎರಡು ಹೊತ್ತಿನ ಜೀವನಕ್ಕಾಗಿ ಹೋರಾಟ ಮಾಡುವ ಶ್ರಮಜೀವಿಗಳು. ಇವರ ಬಗ್ಗೆ ಅಗೌರವವಾಗಿ ಮಾತನಾಡ್ತೀರಾ? ಅಮೆರಿಕಾ ದೇಶದಲ್ಲಿ ಚಮ್ಮಾರನೊಬ್ಬ ಆಳಿದ ಇತಿಹಾಸವಿದೆ, ಯಾರಿಗೂ ವಿದ್ಯೆಯನ್ನ ಬರೆದುಕೊಟ್ಟಿಲ್ಲ. ಪಾರ್ಲಿಮೆಂಟ್‍ನಲ್ಲಿ ನಿಮಗೆ ಮೆಜಾರಿಟಿ ಇದೆ ಅಂತಾ ಕಾನೂನು ತರಲಿಕ್ಕಲ್ಲ ಅಧಿಕಾರ ಕೊಟ್ಟಿರುವುದು ಎಂದು ಕಿಡಿ ಕಾರಿದರು.

Click to comment

Leave a Reply

Your email address will not be published. Required fields are marked *