ನನ್ನ ಪುತ್ರನ ಮದ್ವೆಗೆ ಮನೆಯಿಂದಲೇ ಹಾರೈಸಿದ ನಿಮ್ಮೆಲ್ಲರಿಗೂ ಸದಾ ಋಣಿ: ಎಚ್‍ಡಿಕೆ

Public TV
2 Min Read
nikhil hdk

ಬೆಂಗಳೂರು: ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಮದುವೆ ರಾಮನಗರದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸರಳವಾಗಿ ನೇರವೇರಿದೆ. ಇದೇ ಬೆನ್ನಲ್ಲೇ ಎಚ್‍ಡಿಕೆ ಅವರು ಟ್ವೀಟ್ ಮಾಡಿ ತಮ್ಮ ಮಗ ಹಾಗೂ ಸೊಸೆಗೆ ಮನೆಯಿಂದಲೇ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ನನ್ನ ಪುತ್ರ ನಿಖಿಲ್ ಮತ್ತು ರೇವತಿ ಅವರ ವಿವಾಹ ಇಂದು ಅತ್ಯಂತ ಸರಳ ರೀತಿಯಲ್ಲಿ ನಡೆಯಲು ಸಹಕರಿಸಿದ ಲಕ್ಷಾಂತರ ಕಾರ್ಯಕರ್ತರು ಮತ್ತು ಕುಟುಂಬದ ಹಿತೈಷಿಗಳಿಗೆ ಹೃದಯಾಂತರಾಳದ ಕೃತಜ್ಞತೆಗಳು. ಇಡೀ ಜಗತ್ತು ಕೊರೊನಾ ವೈರಸ್ ಎಂಬ ಮಹಾಮಾರಿಯಿಂದ ತತ್ತರಿಸುತ್ತಿರುವ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ, ವ್ಯವಸ್ಥಿತವಾಗಿ ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕೆಯ ನಡುವೆ ವಿವಾಹ ಅಚ್ಚುಕಟ್ಟಾಗಿ ನೆರವೇರಿದೆ ಎಂದು ಟ್ವಿಟ್ ಮಾಡಿದ್ದಾರೆ.

ಹಾಗೆಯೇ ಶಾಸಕರು, ಕಾರ್ಯಕರ್ತರು, ಮುಖಂಡರು, ಕುಟುಂಬದ ಹಿತೈಷಿಗಳು ಸೇರಿದಂತೆ ನಾಡಿನ ಲಕ್ಷಾಂತರ ಜನರು ನನ್ನ ಕುಟುಂಬದ ಕುಡಿಯ ವಿವಾಹಕ್ಕೆ ಮನೆಯಿಂದಲೇ ಹರಸಿದ್ದೀರಿ. ನಾನು ಮತ್ತು ನನ್ನ ಕುಟುಂಬ ವರ್ಗ ಮಾಡಿದ ಮನವಿಗೆ ನೀವುಗಳು ಸ್ಪಂದಿಸಿದ ರೀತಿ ಅನುಕರಣೀಯ ಮತ್ತು ಮಾದರಿ ಎಂದು ಎಚ್‍ಡಿಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಗತ್ತು ಪ್ರಸಕ್ತ ಎದುರಿಸುತ್ತಿರುವ ಈ ಗಂಡಾಂತರ ಕಳೆದು ಪರಿಸ್ಥಿತಿ ಸಹಜವಾದಾಗ ನಾವು ಮತ್ತು ನೀವುಗಳು ಜತೆ ಸೇರಿ ಒಟ್ಟಿಗೆ ಕುಳಿತು ಊಟ ಮಾಡೋಣ. ನಿಮ್ಮ ಹೃದಯ ವೈಶಾಲ್ಯ ಮತ್ತು ಪ್ರೀತಿಗೆ ನಾವುಗಳು ಸದಾ ಋಣಿ. ನವದಂಪತಿಗೆ ಹರಸಿದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಹೃದಯತುಂಬಿದ ಕೃತಜ್ಞತೆಗಳು ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ 9.30ರಿಂದ 10.20ರ ಶುಭಲಗ್ನದಲ್ಲಿ ನಿಖಿಲ್ ಅವರು ರೇವತಿಯ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ನವ ದಂಪತಿಗೆ ಮದುವೆಯಲ್ಲಿ ಭಾಗಿಯಾಗಿದ್ದ ಗಣ್ಯರು, ಹಿತೈಷಿಗಳು ಧಾರೆ ಎರೆಯುವ ಮೂಲಕ ಆಶೀರ್ವಾದ ಮಾಡಿದ್ದಾರೆ.

ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ದಂಪತಿ, ಎಚ್‍ಡಿ ಕುಮಾರಸ್ವಾಮಿ ದಂಪತಿ ಹಾಗೂ ಉದ್ಯಮಿ ಮಂಜುನಾಥ್ ದಂಪತಿ ಸಮ್ಮುಖದಲ್ಲಿ ನಿಖಿಲ್ ಮತ್ತು ರೇವತಿ ವಿವಾಹ ಕಾರ್ಯಕ್ರಮ ನೆರವೇರಿದೆ. ನಿಖಿಲ್ ಹಾಗೂ ರೇವತಿ ಮನೆಯವರು, ಆಪ್ತರಷ್ಟೆ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಕುಟುಂಬದವರು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *