ತುಮಕೂರು: ಬಂಡಾಯ ಶಾಸಕರ ಸಂಖ್ಯೆ 15 ಅಲ್ಲ 30 ಕ್ಕೆ ಏರಲಿ ಸಮಸ್ಯೆಯಿಲ್ಲ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಟಾಂಗ್ ಜಮೀರ್ ಅಹಮದ್‍ಗೆ ಟಾಂಗ್ ನೀಡಿದ್ದಾರೆ.
ಇಂದು ಸಿ.ಎಸ್ ಪುರದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ನ ಪ್ರಮುಖ ನಾಯಕರು ಜೆಡಿಎಸ್ ಸೇರಲಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಗೆ ಎಚ್. ವಿಶ್ವನಾಥ್ ಪ್ರಮುಖ ಪಾತ್ರವಹಿಸಿದ್ದರು. ಆದರೆ ಕಾಂಗ್ರೆಸ್ ನಲ್ಲಿ ವಿಶ್ವನಾಥ್ ಸೇರಿದ್ದಂತೆ ಹಿರಿಯ ಮುಖಂಡರು ಮೂಲೆ ಗುಂಪಾಗುತ್ತಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಜೆಡಿಎಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.
ಮೈಸೂರಿನ ಮಾಜಿ ಸಂಸದ ವಿಶ್ವನಾಥ್ ಅವರು ಜೆಡಿಎಸ್ ಸೇರ್ಪಡೆಯಾಗುತ್ತಾರಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಶ್ವನಾಥ್ ಸೇರ್ಪಡೆ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಅವರು ಈವರೆಗೂ ನನ್ನನ್ನು ಭೇಟಿ ಮಾಡಿಲ್ಲ, ಈ ಬಗ್ಗೆ ಮಾತನಾಡಿಲ್ಲ ಎಂದು ತಿಳಿಸಿದರು.
ಶಾಸಕ ಎಂ.ಟಿ ಕೃಷ್ಣಪ್ಪ ಅವರು ಆಯೋಜಿಸಿದ ಈ ಕಾರ್ಯಕ್ರಮ 11.30 ಪ್ರಾರಂಭವಾಗಬೇಕಿತ್ತು. ಆದರೆ 3 ಗಂಟೆ ತಡವಾಗಿ ಆರಂಭವಾಗಿತ್ತು. ಇದರಿಂದ ಗಂಟೆಗಟ್ಟಲೆ ಕಾದು ಸುಸ್ತಾಗಿದ್ದ ಜನ ಮಜ್ಜಿಗೆಗೆ ಮುಗಿಬಿದ್ದಿದ್ದರು. ಬಿಸಿಲ ಬೇಗೆ ತಡೆಯಲಾರದೆ ಕಿತ್ತಾಡಿಕೊಂಡು ಜನ ಮಜ್ಜಿಗೆ ಪಡೆದರು.
ಜಮೀರ್ ಅಹ್ಮದ್ ಏನ್ ಹೇಳಿದ್ರು?: ನಾವು ಇರುವುದು ಏಳು ಜನರಲ್ಲ 15 ಜನರಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಮಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿದೆ. ಶಾಸಕರು ನಾವು 15 ಜನ ಜೆಡಿಎಸ್ ಶಾಸಕರು ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದೇವೆ. ಜೆಡಿಎಸ್ ಪಕ್ಷ ಮುಂದಿನ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲುತ್ತದೆ ಎನ್ನುವುದು ಸುಳ್ಳು. ಒಂದು ವೇಳೆ 120 ಸ್ಥಾನಗಳನ್ನು ಗೆದ್ದರೆ ತಾವು ರಾಜಕೀಯವಾಗಿ ಸನ್ಯಾಸ ತೆಗೆದುಕೊಳ್ಳುವುದಲ್ಲದೇ ರಾಜ್ಯವನ್ನೇ ತೊರೆಯುತ್ತೇವೆ. ನಮಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿದೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್ ಕೂಡಾ ಗ್ರೀನ್ ಸಿಗ್ನಲ್ ನೀಡಿದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಹೊಂದಾಣಿಕೆ ಮಾಡಿಕೊಂಡ್ರೂ ನಾವು ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲವೆಂದು ಜಮೀರ್ ಅಹಮದ್ ಹೇಳಿದ್ದರು.