ತಂತಿ ಮೇಲಿಂದನೇ ಪ್ರವಾಹ ಪೀಡಿತರ ಕಡೆಗೂ ನೋಡಿ: ಬಿಎಸ್‍ವೈಗೆ ಹೆಚ್‍ಡಿಕೆ ಟಾಂಗ್

Public TV
2 Min Read
BSY HDK

ಬೆಂಗಳೂರು: ತಂತಿ ಮೇಲಿಂದನೇ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಜನರ ಕಡೆಗೂ ನೋಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹಾಲಿ ಸಿಎಂ ಯಡಿಯೂರಪ್ಪ ಅವರ ಕಾಲೆಳೆದಿದ್ದಾರೆ.

ರಾಜ್ಯದ ಪ್ರವಾಹ ಪೀಡಿತರಿಗೆ ಸರಿಯಾಗಿ ನೆರವು ನೀಡಿದ ಸರ್ಕಾರವನ್ನು ಹೆಚ್‍ಡಿ ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪನವರೇ ತಂತಿ ಮೇಲಿಂದನೇ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಜನರ ಕಡೆಗೂ ನೋಡಿ. ಜನರ ಸಮಸ್ಯೆ ಬಗೆಹರಿಸಲು ಆಗದಿದ್ದರೆ ಜನರೇ ನಿಮ್ಮನ್ನು ‘ತಂತಿ’ ಮೇಲಿನಿಂದ ಇಳಿಸುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಅತೃಪ್ತ ಶಾಸಕರನ್ನು ಅಡ್ಡ ದಾರಿಯಲ್ಲಿ ತೃಪ್ತಿಪಡಿಸಿ ಸಿಎಂ ಪದವಿಗೆ ಏರಿದ ಯಡಿಯೂರಪ್ಪನವರೇ ತಂತಿ ಮೇಲಿಂದನೇ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಜನರ ಕಡೆಗೂ ನೋಡಿ. ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿರುವ ಅವರ ಬದುಕನ್ನು ನಿಮ್ಮ ಸರ್ಕಾರಕ್ಕೆ ಕಟ್ಟಿ ಕೊಡೋಕೆ ಸಾಧ್ಯವಾಗದಿದ್ದರೆ, ಜನರೇ ನಿಮ್ಮನ್ನು ‘ತಂತಿ’ ಮೇಲಿಂದ ಇಳಿಸುತ್ತಾರೆ ಎಂದು ವ್ಯಂಗ್ಯವಾಗಿ ಬರೆದು ಟ್ವೀಟ್ ಮಾಡಿದ್ದಾರೆ.

ನಾನು ಒಂದು ರೀತಿ ತಂತಿ ಮೇಲೆ ನಡೆಯುತ್ತಿದ್ದೇನೆ, ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಹತ್ತಾರು ಸಲ ವಿಚಾರ ಮಾಡಬೇಕಾಗಿದೆ. ನಿರ್ಧಾರ ತೆಗೆದುಕೊಳ್ಳುವಾಗ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಎನಾಗುತ್ತದೆ ಎಂಬುದನ್ನೂ ಚಿಂತನೆ ಮಾಡಬೇಕಾಗಿದೆ ಎಂದು ದಾವಣಗೆರೆಯಲ್ಲಿ ಭಾನುವಾರ ಯಡಿಯೂರಪ್ಪ ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸದ್ಯ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವಿಪಕ್ಷ ನಾಯಕರು ತಾ ಮುಂದು, ನಾ ಮುಂದು ಎಂದು ಬಿಎಸ್‍ವೈ ಹೇಳಿಕೆಗೆ ಟೀಕಿಸುತ್ತಿದ್ದಾರೆ.

ಬಿಎಸ್‍ವೈ ಹೇಳಿಕೆ ಸಿದ್ದರಾಮಯ್ಯ ಅವರು ಕೂಡ ಟಾಂಗ್ ಕೊಟ್ಟಿದ್ದರು, ಸಿಎಂ ಯಡಿಯೂರಪ್ಪ ತಂತಿ ಮೇಲೆ ಯಾಕೆ ನಡೆಯಬೇಕು. ರಾಜಿನಾಮೆ ಕೊಟ್ಟು ಸಿಎಂ ಸ್ಥಾನದಿಂದ ಕೆಳಗೆ ಇಳಿಯಲಿ. ತಂತಿ ಮೇಲೆ ನಡೆದು ಬಿದ್ದುಬಿಟ್ಟಾರು. ಯಡಿಯೂರಪ್ಪ ವೀಕ್ ಚೀಫ್‍ಮಿನಿಸ್ಟರ್, ಯಡಿಯೂರಪ್ಪ ಅವರಿಗೆ ಪಕ್ಷದವರೇ ತುಂಬಾ ತೊಂದರೆ ಕೊಡುತ್ತಿದ್ದಾರೆ. ಅವರು ರೆಕ್ಕೆ ಪುಕ್ಕಗಳು ಕಟ್ ಮಾಡಿದ್ದಾರೆ. ಅಮಿತ್ ಶಾ, ಮೋದಿ ಬಳಿ ಯಡಿಯೂರಪ್ಪಗೆ ಮಾತನಾಡುವ ಶಕ್ತಿಯಿಲ್ಲ. ನೆರೆ ಪ್ರವಾಹ ಪರಿಹಾರ ಕೇಂದ್ರದಲ್ಲಿ ಕೇಳಲು ಧೈರ್ಯವಿಲ್ಲ. ಬಿಜೆಪಿಗೆ 103 ಸೀಟ್‍ಗಳು ಇವೆ. ಹೀಗಾಗಿ ಬಿಜೆಪಿ ಸರ್ಕಾರ ಪತನವಾಗುತ್ತೆ. ನಮ್ಮ ಶಾಸಕರಿಗೆ ಆಸೆ ತೋರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಮಧ್ಯಂತರ ಚುನಾವಣೆ ಬರುತ್ತೆ ಆದರೆ ಜೆಡಿಎಸ್ ಬಿಜೆಪಿ ಜೊತೆಗೆ ಹೋಗುವುದಿಲ್ಲ ಎಂದು ಮಾತಿನ ಚಾಟಿ ಬೀಸಿದ್ದರು.

ಈ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ ಅವರು, ತಂತಿ ಮೇಲಿನ ನಡಿಗೆ ಕುರಿತ ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಸೀಮಿತ ಸಂಪನ್ಮೂಲವನ್ನೆಲ್ಲಾ ಸಮಾಜ ಮತ್ತು ರಾಜ್ಯದ ಅಭಿವೃದ್ಧಿಗೆ ಬಳಸಬೇಕಿದೆ. ಹೀಗಾಗಿ ಹೆಚ್ಚಿನ ಅನುದಾನವನ್ನು ನೀಡುವುದು ಕಷ್ಟಸಾಧ್ಯ. ಅದನ್ನೇ ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *