ಮಂಡ್ಯ: ಮೈತ್ರಿ ಸರ್ಕಾರ ಪತನದ ಬಳಿಕ ಜಿಲ್ಲೆಯ ಜನತೆಯೊಂದಿಗೆ ಸಭೆ ನಡೆಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಭೆಯಲ್ಲಿ ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಜರಿದಿದ್ದಾರೆ.
ಸಭೆ ನಡುವೆ ತಮ್ಮ ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆಯನ್ನು ವೇದಿಕೆ ಮೇಲೆ ಕರೆದು ಸಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿ, ಇಂಥವರಿಗೆ ಯಡಿಯೂರಪ್ಪನೂ ಆಗಲ್ಲ, ಸಿದ್ದರಾಮಯ್ಯನೂ ಆಗಲ್ಲ. ಹಣ ಮಾಡಿ ಬಿಎಸ್‍ವೈ ರೀತಿ ಜೈಲಿಗೆ ಹೋಗಲು ರಾಜಕೀಯಕ್ಕೆ ಬಂದಿಲ್ಲ. ನಾನು ರಾಜಕೀಯದಲ್ಲಿ ಬದುಕಿದ್ದರೆ ಇಂತಹ ಕುಟುಂಬಗಳು ಕಾರಣ ಎಂದರು. ಆ ಮೂಲಕ ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದರು.
Advertisement
Advertisement
ರಾಜಕೀಯದಲ್ಲಿ ಕಾರ್ಯಕರ್ತರಿಗಾಗಿ ಉಳಿದುಕೊಂಡಿದ್ದೇನೆ. ಇಲ್ಲದಿದ್ದರೆ ಇಷ್ಟೊತ್ತಿಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೆ. ನಾನು ಯಾವುದನ್ನೂ ಮುಚ್ಚಿಟ್ಟುಕೊಳ್ಳದೇ ನೇರವಾಗಿ ಹೇಳುತ್ತೇನೆ. ನನಗೆ ಮುಖ್ಯಮಂತ್ರಿ ಅಧಿಕಾರ ಮುಖ್ಯವಲ್ಲ. ರಾಜ್ಯದ ಜನರ ಹೃದಯದ ಸ್ಥಾನದಲ್ಲಿ ನಿಲ್ಲಬೇಕೆನ್ನುವುದು ನನ್ನ ಆಸೆ. ಅತ್ಯಂತ ಸಂತೋಷದಿಂದ ಆ ಜಾಗದಿಂದ ನಿರ್ಗಮಿಸಿದೆ. ಯುವಕರಿಗೆ ದೇವೇಗೌಡರು ಮಾಡಿರುವ ಕೆಲಸ ಗೊತ್ತಿಲ್ಲ. ಕಣ್ಣಲ್ಲಿ ನೀರು ಹಾಕಿ ಮರಳು ಮಾಡಲು ಬಂದಿಲ್ಲ, ನೋವಿನಿಂದ ಬಂದಿದ್ದೇನೆ. ಅಧಿಕಾರ ಬಿಟ್ಟಾಗ ಕಣ್ಣೀರು ಹಾಕದೇ ಸಂತೋಷವಾಗಿ ಹೊರಬಂದೆ. ಯಾವ ಮೈತ್ರಿಯನ್ನೂ ಮಾಡಿಕೊಳ್ಳಲ್ಲ, ಉಪಚುನಾವಣೆಗೆ ಮೈತ್ರಿ ಇಲ್ಲ ಎಂದು ಬಹಿರಂಗ ವೇದಿಕೆಯಲ್ಲಿ ಕುಮಾರಸ್ವಾಮಿ ಘೋಷಿಸಿದರು.