ಬಿಜೆಪಿ, ಕಾಂಗ್ರೆಸ್ ಕಿತ್ತೊಗೆಯಲು ಕನ್ನಡಿಗರು ನನಗೆ ಸುಪಾರಿ ಕೊಟ್ಟಿದ್ದಾರೆ: ಹೆಚ್‌ಡಿಕೆ

Public TV
2 Min Read
HDK

– ಬಿಜೆಪಿ ಅಪಮಾರ್ಗದಲ್ಲಿ ಸರ್ಕಾರ ರಚನೆ ಮಾಡಿತು

ಬೆಂಗಳೂರು: ಕಾಂಗ್ರೆಸ್ ವಿರೋಧಿಸಲು ಬಿಜೆಪಿ ನಾಯಕರು ನನಗೆ ಸುಪಾರಿ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ನನಗೆ ಸುಪಾರಿ ಕೊಟ್ಟಿರೋದು ಬಿಜೆಪಿಯವರಲ್ಲ, ಕನ್ನಡಿಗರು. ಎರಡು ರಾಷ್ಟ್ರೀಯ ಪಕ್ಷಗಳನ್ನು ಹೊರ ಹಾಕಲು ಕನ್ನಡಿಗರು ಸುಪಾರಿ ಕೊಟ್ಟಿದ್ದಾರೆ. ನೀರಾವರಿ ಯೋಜನೆಗಳ ಬಗ್ಗೆ ಮಾತನಾಡೋದಕ್ಕೆ ಸುಪಾರಿ ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

bjp - congress

ಬೆಂಗಳೂರಿನಲ್ಲಿ ಬೆಲೆ ಏರಿಕೆ ವಿರುದ್ಧ ಜೆಡಿಎಸ್ ಪಕ್ಷವು ಫ್ರೀಡಂ ಪಾರ್ಕ್‍ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಬಿಜೆಪಿ ನಾಯಕರು ಎಷ್ಟು ಕಾರಣವೋ, ಕಾಂಗ್ರೆಸ್ ನಾಯಕರು ಅಷ್ಟೇ ಕಾರಣ. ಅಪಮಾರ್ಗದ ಮೂಲಕ ನನ್ನ ನೇತೃತ್ವದ ಮೈತ್ರಿ ಸರ್ಕಾರವನ್ನು ತೆಗೆದರು. ಅದೇ ರೀತಿಯ ಅಪಮಾರ್ಗದ ಮೂಲಕ ಬಿಜೆಪಿ ಸರ್ಕಾರ ಬಂತು. ಆದರೆ ಇವತ್ತು ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ನಾಯಕರು ಅನೈತಿಕ ಸರ್ಕಾರ ಎಂದು ಹೇಳುತ್ತಿದ್ದಾರೆ. ಇದನ್ನು ರಾಜ್ಯದ ಜನರು ಗಮನಿಸಬೇಕು ಎಂದು ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ, ಯಾವುದೇ ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ: ಸಿದ್ದರಾಮಯ್ಯ

ದಾಸರಹಳ್ಳಿಯ ಜನತೆಗೆ ಅಧಿಕಾರಿಗಳು ಕಿರುಕುಳ ಕೊಟ್ಟರೆ ಸರಿ ಇರೋದಿಲ್ಲ. ನಮ್ಮ ಕಾರ್ಯಕರ್ತರು ಕಾನೂನು ಮೀರಿ ಕೆಲಸ ಮಾಡಲ್ಲ ಎಂದು ಎಚ್ಚರಿಕೆ ನೀಡಿದ ಕುಮಾರಸ್ವಾಮಿ, ಇಂದು ಗುಂಡಿಗಳಿಗೆ ಜನ ಬಲಿಯಾಗುತ್ತಿದ್ದಾರೆ. ರಸ್ತೆ ದಾಟಲು ಹೋಗಿ ಹೆಣ್ಣು ಮಗಳು ಸಾವನ್ನಪ್ಪಿದ್ದಾಳೆ ಅಂದರೆ ಏನು ಅರ್ಥ. ಕಳಪೆ ಕಾಮಗಾರಿಗಳಿಂದ ಹೀಗೆ ಆಗುತ್ತಿದೆ. ಕೋರ್ಟ್ ಛೀಮಾರಿ ಹಾಕುತ್ತಿದೆ. ಅಪಘಾತದಲ್ಲಿ ಸಾವನ್ನಪ್ಪಿದರೆ ಅವರ ಬಗ್ಗೆ ಕನಿಕರ ಇಲ್ಲ ಎಂದು ಗುಡುಗಿದ್ದಾರೆ.

JDS 1

ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಟೀಕಾ ಪ್ರಹಾರ
ಬೆಂಗಳೂರಿಗೆ ಸರಿಯಾದ ಸೌಕರ್ಯ ನೀಡಿ ಎಂದು ಉದ್ಯಮಿ ಟಿ.ಎ ಮೋಹನ್ ದಾಸ್ ಪೈ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಸ್ಥಿತಿಯನ್ನು ಬಿಜೆಪಿ ಎಲ್ಲಿಗೆ ತಂದಿದೆ? ಯಾವುದೇ ಕೆಲಸ ಆಗಬೇಕಾದರೆ ಸರ್ಕಾರಕ್ಕೆ ನ್ಯಾಯಾಲಯವೇ ಆದೇಶ ಕೊಡಬೇಕು ಅಥವಾ ಮೋದಿ ಅವರೇ ಹೇಳಬೇಕಾ? ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ

ರಾಷ್ಟ್ರೀಯ ಪಕ್ಷಗಳು ಯಾವ ರೀತಿ ಚುನಾವಣೆ ನಡೆಸುತ್ತಿವೆ ಎನ್ನುವುದು ನನಗೆ ಗೊತ್ತಿದೆ. ಕಾಂಗ್ರೆಸ್, ಬಿಜೆಪಿಗೆ ಕನ್ನಡಿಗರು ರಾಜ್ಯವನ್ನು ಗುತ್ತಿಗೆ ಕೊಟ್ಟಿಲ್ಲ. ಇದನ್ನು ಎರಡೂ ಪಕ್ಷಗಳು ನೆನಪಿಟ್ಟುಕೊಳ್ಳಬೇಕು. ನಾನು ಒಂದು ವರ್ಗದ ಜನರನ್ನು ಓಲೈಸುತ್ತಿಲ್ಲ. ಎಲ್ಲರ ಪರವಾಗಿ ನಾನು ದನಿ ಎತ್ತಿದ್ದೇನೆ. ನಾನು ಸಿಎಂ ಆಗಲು ಈ ಹೋರಾಟ ಅಲ್ಲ. ನಾಡಿನ ಜನರಿಗಾಗಿ ನನ್ನ ಹೋರಾಟ, ಉತ್ತಮ ಬದುಕು ಕಟ್ಟಿಕೊಡೋದಿಕ್ಕೆ ನನ್ನ ಹೋರಾಟ. ನಮ್ಮ ಮತ ಮಾರಾಟಕಿಲ್ಲ ಎನ್ನುವ ವಾತಾವರಣವನ್ನು ರಾಜ್ಯದಲ್ಲಿ ತರುತ್ತೇವೆ. ಅಂಥಹ ವಾತಾವರಣ ಹಳ್ಳಿ ಹಳ್ಳಿಯಲ್ಲಿ ಪ್ರಾರಂಭ ಮಾಡುತ್ತೇವೆ. ಈ ಮೂಲಕ ಬಿಜೆಪಿ ಸರ್ಕಾರ ಕಿತ್ತೊಗೆಯುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *