ಹಾಸನ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕುಮಾರಸ್ವಾಮಿಯವರೇ 5 ವರ್ಷ ಸಿಎಂ ಎಂದು ಹೇಳಿ ಆಗಿದೆ. ಅದರಂತೆ ಕುಮಾರಸ್ವಾಮಿ ಅಷ್ಟು ದಿನ ರಾಜ್ಯದ ಮುಖ್ಯಮಂತ್ರಿಯಾಗಿರುತ್ತಾರೆ ಅಂತ ಮಾಜಿ ಸಿಎಂ ಎಂ.ವೀರಪ್ಪಮೊಯ್ಲಿ ಹೇಳಿದ್ದಾರೆ.
ಜಿಲ್ಲೆ ಶ್ರವಣಬೆಳಗೊಳದಲ್ಲಿ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಕೊನೇ ದಿನದ ಅಭಿಷೇಕದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾರು ಏನೇ ಮಾಡಿದ್ರೂ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರು ಹೇಳಿದಂತೆ ಎಚ್‍ಡಿಕೆ ಅವರೇ 5 ವರ್ಷ ಸಿಎಂ ಆಗಿರುತ್ತಾರೆ. ಸರಕಾರ ಸುಭದ್ರವಾಗಿರಲಿದೆ ಎಂದರು.
ಯಾರೋ ಒಬ್ಬಿಬ್ಬರಿಂದ ಸರಕಾರ ಉರುಳಿಸಲು ಸಾಧ್ಯವಿಲ್ಲ ಎಂದ ಮೊಯ್ಲಿ, ಸಮ್ಮಿಶ್ರ ಸರಕಾರ ಆಪತ್ತಿನಲ್ಲಿದೆ ಅನ್ನೋದು ಊಹಾಪೋಹ. ಸರ್ಕಾರ ಉರುಳಿಸಲು ಯತ್ನಿಸುವವರು ನಾಶವಾಗುತ್ತಾರೆ ಎಂದು ಎಚ್ಚರಿಸಿದರು.
ಈ ಹಿಂದೆ ಯಡಿಯೂರಪ್ಪ ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ ಕಟ್ಟಿ, ಕಮಲ ಪಕ್ಷಕ್ಕೆ ಶಾಪ ಹಾಕಿ ಹೋಗಿದ್ರು. ನಮ್ಮಪ್ಪನಾಣೆ ಮತ್ತೆಂದೂ ಬಿಜೆಪಿಗೆ ಬರೋದಿಲ್ಲ ಎಂದು ಹೇಳಿದ್ರು. ಆದರೀಗ ಮತ್ತೆ ಬಿಜೆಪಿಗೆ ಬಂದಿದ್ದಾರೆ. ಅವರು ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಯತ್ನಿಸಿದ್ರೆ ಅವರಿಗೆ ಮಾತ್ರವಲ್ಲ, ಬಿಜೆಪಿಗೂ ಕೆಟ್ಟ ಹೆಸರು ಬರಲಿದೆ. ವಾಮಾಚಾರದ ಮೂಲಕ ಸರ್ಕಾರ ಬೀಳಿಸಲು ಯತ್ನಿಸಿದ್ರೆ ಅವರಿಗೇ ಒಳ್ಳೆದಾಗೋದಿಲ್ಲ ಎಂದು ಖಡಕ್ ಆಗಿ ನುಡಿದರು.
ಮೋದಿ ವಿರುದ್ಧ ಟೀಕೆ:
ಇದೇ ವೇಳೆ ಪ್ರಧಾನಿ ಮೋದಿ ಕಾರ್ಯವೈಖರಿಯನ್ನು ಟೀಕಿಸಿದ ಅವರು, ಕೇವಲ ಚುನಾವಣೆ ಬಂದಾಗ ಮಾತ್ರ ಅವರಿಗೆ ಕರ್ನಾಟಕ ನೆನಪಾಗಲಿದೆ. ಮೋದಿ ಒಬ್ಬ ಸರ್ವಾಧಿಕಾರಿ. ಕೇಂದ್ರ ಸರಕಾರದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಟೀಕಿಸಿದರು. ಕೇಂದ್ರ ಸರ್ಕಾರ ಐಟಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ವಿಪಕ್ಷಗಳನ್ನ ಬಗ್ಗು ಬಡಿಯೋ ಯತ್ನ ನಡೆಸುತ್ತಿದೆ. ಇದಕ್ಕೆ ಸಚಿವ ಡಿಕೆಶಿ ಅವರ ಮೇಲೆ ನಡೆದ ದಾಳಿ ಸಾಕ್ಷಿ. ಇದೆಲ್ಲವೂ ಭವಿಷ್ಯದಲ್ಲಿ ಬಿಜೆಪಿಗೇ ಮುಳುವಾಗಲಿದೆ ಎಂದು ಎಚ್ಚರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv