ರಾಮನಗರ: ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಗೆ ಇಡಿ ಸಮನ್ಸ್ ನೀಡಿರುವ ವಿಚಾರದಲ್ಲಿ ಇಷ್ಟೊಂದು ತರಾತುರಿ ಅಗತ್ಯ ಇರಲಿಲ್ಲ. ಹಲವರು ದೊಡ್ಡ ಮಟ್ಟದಲ್ಲಿ ಕಾನೂನುಬಾಹಿರ ಚಟುವಟಿಕೆ ಮಾಡಿರುವ ಬಗ್ಗೆ ಗಮನವಿಲ್ಲ. ಆದರೆ ಇದ್ಯಾವುದೋ ಕೇಸ್ ಇಟ್ಕೊಂಡು ಅವರ ಕುಟುಂಬದ ವಿರುದ್ಧ ಹೊರಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಇಂದು ಚನ್ನಪಟ್ಟಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡುದ ಎಚ್‍ಡಿಕೆ ಅವರು, ಡಿಕೆಶಿ ಪುತ್ರಿಗೆ ಸಮನ್ಸ್ ನೀಡಿದ್ದರಲ್ಲಿ ಕೇಂದ್ರದ ಅಧಿಕಾರಿಗಳಿದ್ದಾರೋ, ಬೇರೆಯವರಿದ್ದಾರೋ ಗೊತ್ತಿಲ್ಲ ಎಂದರು.
ಇದೇ ವೇಳೆ ರಾಜ್ಯದಲ್ಲಿ ನೂತನವಾಗಿ ಜಾರಿಯಾಗಿರುವ ಮೋಟಾರ್ ವಾಹನ ಕಾಯ್ದೆ ಅನ್ವಯ ಜನಸಾಮಾನ್ಯರಿಗೆ ಅನುಕೂಲವಾಗುವ ತೀರ್ಮಾನವನ್ನು ಮಾಡಬೇಕು. ಈಗ ನನ್ನ ಕೈಯಲ್ಲಿ ಅಧಿಕಾರವಿಲ್ಲ, ಅಧಿಕಾರದಲ್ಲಿ ಇರುವವರು ಏನು ಮಾಡುತ್ತಾರೆ ನೋಡೋಣ. ಬಿಜೆಪಿಯಲ್ಲಿರುವವರಿಗೆ ಗೊತ್ತು ಗುರಿಯಿಲ್ಲ. ಅವರು ಅಧಿಕಾರ ಮಾಡುತ್ತಿರುವ ವಿಧಾನ ನಿಮಗೆ ಗೊತ್ತಿದೆ. ನಾನು ಈ ಬಗ್ಗೆ ಚರ್ಚೆ ಮಾಡಲ್ಲ, ಜನರಿಗೆ ಈ ಸರ್ಕಾರದ ಪೆಟ್ಟು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದರು.
ಸಿಪಿವೈಗೆ ಪರೋಕ್ಷ ಟಾಂಗ್ : ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡುತ್ತಾ ಕೆಲವರು ಈಗ ಹಣದ ವಸೂಲಿ ದಂಧೆಗೆ ಇಳಿದಿದ್ದಾರೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಅಂತಹವರಿಗೆ ಮಣೆ ಹಾಕಬೇಡಿ ನನಗೆ ಗೊತ್ತಿದೆ. ಈ ಸರ್ಕಾರದ ಆಯಸ್ಸು ಕೆಲವೇ ತಿಂಗಳು ಮಾತ್ರ. ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಅಧಿಕಾರಿಗಳಿಗೆ ಹೇಳುವ ಮೂಲಕ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಪೊಲೀಸ್ ಇಲಾಖೆ ತಮ್ಮ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಿ. ಅಕ್ರಮ ಮರಳು ಸಾಗಾಣಿಕೆಗೆ ನಾನೆಂದೂ ಪ್ರೋತ್ಸಾಹ ನೀಡಿಲ್ಲ. ಪೊಲೀಸ್ ಇಲಾಖೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿಲ್ಲ. ನಾನು ಜವಾನನಿಂದ ಹಿಡಿದು ಎಲ್ಲರನ್ನೂ ಬಹುವಚನದಿಂದಲೇ ಮಾತನಾಡಿದ್ದೇನೆ. ಅಧಿಕಾರ ಶಾಶ್ವತ ಅಲ್ಲ, ನಾನು ದಬ್ಬಾಳಿಕೆ ನಡೆಸುವುದಿಲ್ಲ. ಕ್ಷೇತ್ರದ ಜನತೆ ಕೆಲಸ ಕಾರ್ಯಗಳಿಗೆ ಯಾವುದೇ ಅಧಿಕಾರಿ ತೊಂದರೆ ಮಾಡಬೇಡಿ ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಮಳೂರು ಸಮೀಪದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಭಾಗಿಯಾಗಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು. ಆ ಬಳಿಕ ಮಾತನಾಡಿ, ಋಣ ಮುಕ್ತ ಕಾಯ್ದೆ ವಿಚಾರದಲ್ಲಿ ಇಂದಿನ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾಯ್ದೆ ಜಾರಿಯ ಬಗ್ಗೆ ಜವಾಬ್ದಾರಿಯೂ ಕೂಡ ಇದೆ. ನಾನು ಋಣ ಮುಕ್ತ ಖಾಯ್ದೆ ಜಾರಿಗೆ ತಂದಿದ್ದು, ಯಾರು ಖಾಸಗಿ ವ್ಯಕ್ತಿಗಳಿಂದ ಹಣವನ್ನು ಬಡ್ಡಿಗೆ ಸಾಲ ಪಡೆದು, ಅಸಲಿಗಿಂತ ಬಡ್ಡಿಯನ್ನ ಜಾಸ್ತಿ ಕಟ್ಟಿರುವ ಪ್ರಕರಣಗಳು ನನ್ನ ಗಮನಕ್ಕೆ ಬಂದ ಕಾರಣದಿಂದ ಯೋಜನೆ ಜಾರಿ ಮಾಡಿದೆ. ಬಡವರು ಸಮಸ್ಯೆಯಿಂದ ಬಳಲಬಾರದು ಎಂಬುವುದು ನನ್ನ ಯೋಜನೆಯನ್ನು ಜಾರಿಗೆ ತಂದಿದ್ದೆ ಎಂದು ತಿಳಿಸಿದರು.