ನೆಮ್ಮದಿ ಕೆಡಿಸಲು ಕೆಲ ಶಕ್ತಿಗಳು ರಾಜ್ಯದಲ್ಲಿ ಆಜಾನ್, ಸುಪ್ರಭಾತ ಸಂಘರ್ಷ ನಡೆಸಿವೆ: ಹೆಚ್‍ಡಿಡಿ

Public TV
2 Min Read
hd devegowda 2

ರಾಯಚೂರು: ರಾಜ್ಯದ ಜನರ ನೆಮ್ಮದಿ ಕೆಡಿಸಲು ಕೆಲ ಶಕ್ತಿಗಳು ಆಜಾನ್, ಸುಪ್ರಭಾತ ವಿಚಾರದಲ್ಲಿ ಸಂಘರ್ಷವನ್ನು ಉಂಟು ಮಾಡುತ್ತಿವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.

ಸಿಂಧನೂರಿನಲ್ಲಿ ಮಾತನಾಡಿದ ಅವರು, ಹಿಂದೂ ದೇವಾಲಯಗಳಲ್ಲಿ ಪ್ರತಿದಿನ ಸುಪ್ರಭಾತ ಹಾಕಲಾಗುತ್ತಿದೆ. ಅದೇ ರೀತಿ ಮುಸಲ್ಮಾನರೂ ಅವರ ಪದ್ಧತಿ ಪ್ರಕಾರ ಅವರ ಧರ್ಮದ ಪ್ರಾರ್ಥನೆ ಮಾಡುತ್ತಾರೆ. ಈವರೆಗೆ ಇಲ್ಲದ ಸಂಘರ್ಷ ಈಗ ಯಾಕೆ ಆರಂಭವಾಗಿದೆ. ಇದಕ್ಕೆಲ್ಲ ಯಾರು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.

hd devegowda 1

ರಾಜಕೀಯವಾಗಿ ಬಳಸಿಕೊಳ್ಳಲು ಕೆಲವರು ಇಂತಹ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ನಾನು ಇದಕ್ಕೆ ಹೆಚ್ಚಿನ ಮಹತ್ವ ಕೊಡಲ್ಲ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 8 ವರ್ಷ ಆಯಿತು. ಆದರೆ ಈಗ ಈ ಗಲಾಟೆ ಆರಂಭವಾಗಿದೆ. ಇದರ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನು? ಇದರ ಹಿಂದೆ ಏನು ಉದ್ದೇಶವಿದೆ. ವಾಜಪೇಯಿಯವರು ಇದ್ದಾಗ ಇಲ್ಲದ ಗಲಾಟೆ ಈಗ ಆಗಿದೆ. ಜನರನ್ನು ವಿಭಜಿಸುವ ಹುನ್ನಾರವನ್ನು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.

narendra modi

ಮತ್ತೊಮ್ಮೆ ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ರಾಷ್ಟ್ರೀಯ ಪಕ್ಷಗಳು ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಈ ದೇಶದಲ್ಲಿ ನೂರಾರು ಜಾತಿ, ಧರ್ಮಗಳಿವೆ. ಶಕ್ತಿ ಬಲಪಡಿಸಿಕೊಳ್ಳಲು ಈ ರೀತಿ ಪ್ರಯತ್ನಿಸಿದರೆ ಏನು ದುಷ್ಪರಿಣಾಮ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಜಿನ್ನಾ ಆಗೋ ಕನಸು ಕಾಣ್ತಿರೊ ಓವೈಸಿಯನ್ನು ಜೈಲಿಗೆ ಹಾಕಿ: ಬಿಜೆಪಿ ಸಂಸದ

bjp congress 1

ಚುನಾವಣೆ ಬೆನ್ನಲ್ಲೆ ಪಕ್ಷಾಂತರ ಪರ್ವದ ವಿಚಾರವಾಗಿ ಮಾತನಾಡಿದ ಅವರು, ಪಕ್ಷದಿಂದ ಹೋಗುವವರನ್ನು ಹಿಡಿಯಲು ಆಗಲ್ಲ. ಜಿಟಿಡಿ ಪಕ್ಷ ಬಿಟ್ಟು ಹೋಗುತ್ತೇನೆ ಎಂದರು. ಆದರೆ ಅವರು ಜೆಡಿಎಸ್‍ನಲ್ಲೇ ಇದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನಲ್ಲಿ ಏನಾಗುತ್ತದೆ ಎಂದು ಅಂತಿಮವಾಗಿ ಕಾದು ನೋಡಬೇಕು ಎಂದರು. ಇದನ್ನೂ ಓದಿ: ಚಹಾ, ಸಿಗರೇಟ್ ತಂದುಕೊಡುವಂತಹ ರೌಡಿಗಳಿಂದ ನಾನೇನು ಕಲಿಯಬೇಕಿಲ್ಲ: ಯತ್ನಾಳ್

ರಾಜ್ಯದಲ್ಲಿ ಪಿಎಸ್‍ಐ ಹಗರಣ ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ. ಏನಾದರೂ ಮಾತನಾಡಬೇಕಾದರೆ, ಸಾಕ್ಷಿ ನೀಡುವ ಶಕ್ತಿ ಇರಬೇಕು ಎಂದರು. ಇದನ್ನೂ ಓದಿ: ಈ ಸರ್ಕಾರಕ್ಕೆ ಗಟ್ಸ್, ತಾಕತ್ತು ಇಲ್ಲ- ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ

hd devegowda

ನಮ್ಮ ರಾಜ್ಯಕ್ಕೆ ನಮ್ಮ ಹಕ್ಕಿನ ನೀರನ್ನು ಬಳಸಿಕೊಳ್ಳಲು ಆಗಿಲ್ಲ. ನಮ್ಮ ಯೋಗ್ಯತೆಗೆ ಮಹದಾಯಿಯಲ್ಲಿ 13 ಟಿಎಂಸಿ ನೀರನ್ನ ಟ್ರಿಬ್ಯುನಲ್ ಅಡಾಪ್ಟ್ ಮಾಡಿದರು. 5 ಟಿಎಂಸಿ ನೀರನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದ ಅವರು, ಕರ್ನಾಟಕ, ಗೋವಾದಲ್ಲೂ ಬಿಜೆಪಿ ಸರ್ಕಾರವಿದೆ. ಆದರೂ ನಮ್ಮ ರಾಜ್ಯದಲ್ಲಿ ನಮ್ಮ ನದಿಗಳ ನೀರನ್ನು ಬಳಕೆ ಮಾಡಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಲಧಾರೆ ಕಾರ್ಯಕ್ರಮ ಮಾಡಲಾಗಿದೆ. ಈ ಕಾರ್ಯಕ್ರಮವು ಮೇ 13ಕ್ಕೆ ದೊಡ್ಡ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *