-ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಮೈತ್ರಿ ರಚನೆ
-ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ನೀಡದಕ್ಕೆ ನೋವಿದೆ
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್. ವಿಶ್ವನಾಥ್ ಅವರು ರಾಜೀನಾಮೆ ನೀಡಿರುವ ವಿಚಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರವರು ಪ್ರತಿಕ್ರಿಯಿಸಿ ನಾವು ಮತ್ತೊಮ್ಮೆ ಅವರ ಮನವೊಲಿಸಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶುಕ್ರವಾರ ನಮ್ಮ ಪಕ್ಷದಲ್ಲಿ ಸೋತ ಅಭ್ಯರ್ಥಿಗಳ ಸಭೆ ನಡೆಯಲಿದೆ. ಅಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನ ಮಾಡಲಾಗುತ್ತೆ, ಈ ಹಿಂದೆ ಹೇಳಿದಂತೆ ನಾನು ಸೋತವರನ್ನು ಕಡೆಗಾಣಿಸದೇ ಅವರಿಗೂ ನಾಳೆ ಗೌರವ ಕೊಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
Advertisement
Advertisement
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ಅವರು ರಾಜೀನಾಮೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಶ್ವನಾಥ್ ರಾಜೀನಾಮೆ ಕೊಟ್ಟಿದ್ದಾರೆ. ಹಿಂದುಳಿದ ವರ್ಗದ ಮುಖಂಡರ ಸಭೆ ಇಂದು ಮಾಡುತ್ತೇನೆ. ಈ ಸಭೆಗೆ ವಿಶ್ವನಾಥ್ ಕೂಡ ಬರುತ್ತಾರೆ. ಅಲ್ಲಿ ಮುಖಂಡರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಹಾಗೆಯೇ ಮತ್ತೊಮ್ಮ ಹಿಂದುಳಿದ ವರ್ಗದ ನಾಯಕರ ಜೊತೆ ಸೇರಿ ವಿಶ್ವನಾಥ್ ಅವರ ಮನವೊಲಿಕೆಗೆ ಪ್ರಯತ್ನ ಮಾಡುತ್ತೇವೆ. ಪಕ್ಷದ ಅಧ್ಯಕ್ಷರು ಪಕ್ಷ ಬಿಡಲ್ಲ, ಆದರೆ ಅಧ್ಯಕ್ಷ ಸ್ಥಾನದಲ್ಲಿ ಇರಲ್ಲ ಎಂದಿದ್ದಾರೆ. ಈಗ ನಾನು ಅದಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಎರಡು ದಿನಗಳ ಹಿಂದೆ ಸುದೀರ್ಘವಾದ ಚರ್ಚೆ ಆಯ್ತು. ಗುರುವಾರ ಬಂದು ಹೇಳುತ್ತೇನೆ ಎಂದು ವಿಶ್ವನಾಥ್ ಹೇಳಿದ್ದಾರೆ ಎಂದು ತಿಳಿಸಿದರು.
Advertisement
Advertisement
ಸಂಪುಟ ವಿಸ್ತರಣೆಯಲ್ಲಿ ಮುಸ್ಲಿಮರಿಗೆ ಅವಕಾಶ ಕೊಡಲಿಲ್ಲ ಅನ್ನೋ ವಿಚಾರದ ಬಗ್ಗೆ ಮಾತನಾಡಿ, ಸಿಎಂ ಮತ್ತು ದೇವೇಗೌಡರ ನಡುವೆ ಭಿನ್ನಾಭಿಪ್ರಾಯ ಇದೆ ಅನ್ನೋದು ಮಾಧ್ಯಮಗಳ ಕಲ್ಪನೆ ಅಷ್ಟೇ. ಬುಧವಾರ ಎರಡು ನಿಗಮಗಳ ಅಧ್ಯಕ್ಷರ ನೇಮಕ ಮಾಡುವಾಗಲೂ ನನ್ನ ಸಲಹೆ ಕೇಳಲು ಸಿಎಂ ಬಂದಿದ್ದರು. ಅವರಿಗೆ ನಾನು ಸಲಹೆ ನೀಡಿದ್ದೇನೆ. ಆರು ತಿಂಗಳು ಅಥವಾ ಒಂದು ವರ್ಷಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ ಬರಲಿದೆ. ಈ ಬಾರಿಯ ಸ್ಥಳೀಯ ಸಂಸ್ಥೆಯಲ್ಲಿ ನಾವು ಎಂಎಲ್‍ಎ ಕ್ಷೇತ್ರದಲ್ಲಿ ಗೆಲ್ಲದ ಜಾಗದಲ್ಲಿ 3-4 ಜನ ಗೆದ್ದಿದ್ದಾರೆ. ಮುಸ್ಲಿಮರಿಗೆ ಅನ್ಯಾಯ ಮಾಡಿದ್ದೇವೆ ಎಂದಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 50% ಅಲ್ಪಸಂಖ್ಯಾತ ಸಮುದಾಯದವರು ಗೆದ್ದಿದ್ದಾರೆ. ಆದರೂ ಸಚಿವ ಸ್ಥಾನ ಕೊಡಲಿಲ್ಲ ಅನ್ನೋ ನೋವಿದೆ ಅವರಿಗೆ. ಅದಕ್ಕೆ ಕ್ಷಮೆ ಕೇಳುತ್ತೇನೆ. ಅನೇಕ ಕೆಲಸ ಅವರಿಗಾಗಿ ಮಾಡಿದ್ದೇವೆ. ಆದರೆ ನಾನು ಅಲ್ಪಸಂಖ್ಯಾತರಿಗೆ ಏನು ಮಾಡಿಲ್ಲ ಅನ್ನೋದು ತಪ್ಪು ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ನೀವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಿರಿ ಎಂದು ಹೇಳಿದ್ದೇನೆ. ಮೊನ್ನೆ ರಾಹುಲ್ ಅವರನ್ನು ಭೇಟಿಯಾದಾಗ ರಾಜಕೀಯದ ಬಗ್ಗೆ ಮಾತಾಡಿಲ್ಲ. ನಾವು ಒಂದು ಸಚಿವ ಸ್ಥಾನ ಪಕ್ಷೇತರಿಗೆ ನೀಡಿದ್ದೇವೆ ಎಂದು ಹೇಳಿದ್ದೇನೆ. ನಾಯಕರು ಬಹಿರಂಗ ಹೇಳಿಕೆ ಕೊಡದಂತೆ ಸೂಚನೆ ನೀಡಲು ರಾಹುಲ್‍ರಿಗೆ ತಿಳಿಸಿದ್ದೇನೆ. ಪಕ್ಷದ ಬಗ್ಗೆ ಯಾರು ಮಾತಾಡದಂತೆ ಕ್ರಮವಹಿಸಲು ಹೇಳಿದ್ದೇನೆ. ಇದು ಬಿಟ್ಟು ಏನನ್ನು ಅವರ ಜೊತೆ ಮಾತಾಡಿಲ್ಲ ಎಂದರು.
ನಾಯಕರು ಬಹಿರಂಗವಾಗಿ ಮಾತಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಹೀಗಾಗಿ ಅದನ್ನ ಕಂಟ್ರೋಲ್ ಮಾಡಲು ಹೇಳಿದ್ದೇನೆ. ಒಂದು ಸ್ಥಾನ ಹೋಯ್ತು ಅಂತ ನಾನು ಚಿಂತೆ ಮಾಡೊಲ್ಲ. ಸಿದ್ದರಾಮಯ್ಯ ಸಲಹೆ ಮೇರೆಗೆ ಒಂದು ಸ್ಥಾನ ಕಾಂಗ್ರೆಸ್ ಅವರಿಗೆ ನೀಡಿದ್ದೇವೆ. ಒಳ್ಳೆ ಕೆಲಸ ಮಾಡಿದರು ಮಾಧ್ಯಮಗಳು ಹೇಳುತ್ತಿಲ್ಲ. ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗದಂತೆ ನಡೆಯಬೇಡಿ ಅಂತ ರಾಹುಲ್‍ಗೆ ಮನವಿ ಮಾಡಿದ್ದೇವೆ. ರಾಹುಲ್ ಬಿಟ್ಟು ನಾನು ಯಾರನ್ನು ಭೇಟಿಯಾಗಿಲ್ಲ ಎಂದು ಹೇಳಿದರು.
ಸರ್ಕಾರದ ಬಗ್ಗೆ ಜಾಹೀರಾತು ನೀಡಿದ್ದೇವೆ. ಸಿಎಂ ನಾಳೆಯಿಂದ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಇದೊಂದು ವಿಶೇಷ ಕಾರ್ಯಕ್ರಮ. ಹಿಂದೆ ಕಾಮರಾಜರು ಸಿಎಂ ಆದಾಗ ಹೀಗೆ ಮಾಡಿದ್ದರು. ಗ್ರಾಮಗಳಲ್ಲಿ ಇರುವ ಸಮಸ್ಯೆ ಪರಿಹಾರ ನೀಡುವ ಕಾರ್ಯಕ್ರಮ ಇದು. ಸಿಎಂ ಗ್ರಾಮ ವಾಸ್ತವ್ಯ ವಿಚಾರ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂದು ವಿಭಾಗ ಬೇಡ. 30 ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿ ಅಂತ ಸಿಎಂಗೆ ಸಲಹೆ ಕೊಟ್ಟಿದ್ದೇನೆ ಎಂದರು.
ಮಾಧ್ಯಮಗಳಲ್ಲಿ ಮೈತ್ರಿ ಸರ್ಕಾರ ನಡೆಸಿದರೆ ಕಾಂಗ್ರೆಸ್‍ಗೆ ಡ್ಯಾಮೇಜ್ ಆಗುತ್ತೆ ಎಂದು ಕೆಲವು ನಾಯಕರು ಹೇಳಿದ್ದಾರೆ. ಈ ಬಗ್ಗೆ ನಾನೇನು ಹೇಳೊಲ್ಲ. ಮೈತ್ರಿ ಸರ್ಕಾರ ನಾನು ಮಾಡಿದ್ದಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಸರ್ಕಾರ ರಚನೆ ಆಗಿದ್ದು, ನಾನು ಅವತ್ತೆ ಕಾಂಗ್ರೆಸ್ ನಾಯಕರಿಗೆ ಸರ್ಕಾರ ರಚನೆ ಬೇಡ ಎಂದು ಹೇಳಿದ್ದೆ. ಆದರೆ ಕಾಂಗ್ರೆಸ್ ನಾಯಕ ಗುಲಾಂನಬಿ ಅಜಾದ್ ಕೈ ಹಿಡಿದು ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ಮನವಿ ಮಾಡಿದರು. ನಾನು ಆಗೋಲ್ಲ ಎಂದಿದ್ದೆ ಆದರೆ ಬೆಳಗ್ಗೆ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಎಂದರು ಅಲ್ಲಿಂದ ಇಲ್ಲಿಯವರೆಗೂ ಸರ್ಕಾರ ಬಂದಿದೆ ಎಂದು ತಿಳಿಸಿದರು.
ನಮ್ಮಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗೋ ರೀತಿ ನಾನು, ನಮ್ಮ ಪಕ್ಷದವರು ಮಾತಾಡೊಲ್ಲ. ನಾನು ಪಕ್ಷ ಸಂಘಟನೆ ಬಗ್ಗೆ ಕೆಲಸ ಮಾಡುತ್ತೇನೆ. ನಮ್ಮಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲದಂತೆ ನಡೆದುಕೊಳ್ತೀವಿ. ಮುಂದಿನ ಚುನಾವಣೆಗಳಿಗೆ ಪಕ್ಷವನ್ನು ತಯಾರಿ ಮಾಡೋ ಕೆಲಸ ನಾನು ಮಾಡ್ತೀನಿ ಅಷ್ಟೆ. ಇನ್ಯಾವುದೇ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ದೇಶ ಒಂದು ಚುನಾವಣೆ ವಿಚಾರವಾಗಿ ಮಾತನಾಡಿ, ಪ್ರಾದೇಶಿಕ ಪಕ್ಷಗಳಲ್ಲಿ ಇದಕ್ಕೆ ಭಿನ್ನ ಭಿನ್ನ ಅಭಿಪ್ರಾಯ ಇದೆ. ಒಂದೇ ಬೂತಲ್ಲಿ ಎರಡೆರಡು ಇವಿಎಂ ಇಟ್ಟು ಮತದಾನ ಆಗುತ್ತೆ. ಅಷ್ಟು ದೂರಕ್ಕೆ ನಾವಿನ್ನೂ ಮುಂದುವರೆದಿಲ್ಲ. ಸದ್ಯಕ್ಕೆ ಒಂದು ದೇಶ ಒಂದು ಚುನಾವಣೆ ವಿಚಾರ ಕಷ್ಟ ಎಂದ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೆಯೇ ಕಾಂಗ್ರೆಸ್ ಒಂದೇ ಲೋಕಸಭೆಯಲ್ಲಿ ಹೋಗಿದ್ದರೆ 10 ಸ್ಥಾನ ಬರುತ್ತಿತ್ತು ಎಂದು ರಾಹುಲ್ ಗಾಂಧಿಗೆ ಸಿದ್ದರಾಮಯ್ಯರಿಂದ ದೂರು ಹೋಗಿರುವ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]