ಬೆಂಗಳೂರು: ರಾಜ್ಯದಲ್ಲಿ ನೆರೆಯಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ನೆರವು ನೀಡುವುದು ನಮ್ಮ ಕರ್ತವ್ಯವಾಗಿದ್ದು, ನಾನು ಮತ್ತು ನನ್ನ ಪಕ್ಷ ನಿಮ್ಮೊಂದಿಗೆ ಇರುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಅವರು ಪತ್ರ ಬರೆದಿದ್ದಾರೆ.
ಬಹುದೊಡ್ಡ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿ ಜನರಿಗೆ ಅಗತ್ಯ ನೆರವು ನೀಡುವ ಸಂದರ್ಭದಲ್ಲಿ ಕೆಲವು ಲೋಪದೋಷ, ನ್ಯೂನತೆಗಳು ಎದುರಾಗುವುದು ಸಹಜ. ಆದರೆ ಇದರಲ್ಲಿ ರಾಜಕೀಯ ಮಾಡದೇ ಎಲ್ಲರೂ ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಪತ್ರದಲ್ಲಿ ಸಲಹೆ ಎಚ್‍ಡಿಡಿ ನೀಡಿದ್ದಾರೆ.
Advertisement
Advertisement
ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ, ಕರಾವಳಿ ಪ್ರದೇಶ ಮತ್ತು ಮಲೆನಾಡು ಪ್ರದೇಶಗಳ ಬಹುತೇಕ ಜಿಲ್ಲೆಗಳು ಕಳೆದ ವಾರದಿಂದ ನೆರೆ ಮತ್ತು ಭೂ ಕುಸಿತದಿಂದ ಅಪಾರ ಸಾವು-ನೋವು ಉಂಟಾಗಿದೆ. ನೆರೆ ಉಂಟಾಗಿರುವ ಪ್ರದೇಶಗಳಲ್ಲಿ ಸಂತ್ರಸ್ತರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಸರ್ಕಾರದ ಮೊದಲ ಕರ್ತವ್ಯವಾಗಿದೆ. ಅಲ್ಲದೇ ಪ್ರವಾಹದಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ಶಿಬಿರಗಳನ್ನು ತೆರೆದು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸರ್ಕಾರ ಕಾರ್ಯಗಳ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಪಡೆದಿದ್ದು, ಅಗಾದ ಪ್ರಮಾಣದ ದುರಂತವನ್ನು ನಿಭಾಯಿಸುವುದು ಕಷ್ಟಸಾಧ್ಯ. ಇದರಲ್ಲಿ ಕೆಲವೊಮ್ಮೆ ನ್ಯೂನತೆಗಳು ಎದುರಾಗುತ್ತವೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಯಾವುದೇ ರಾಜಕಾರಣ ಬೆರಸದೆ ಸಂತ್ರಸ್ತರ ನೆರವಿಗೆ ಧಾವಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಈ ಕಾರ್ಯವನ್ನು ಸಮಯೋಜಿತವಾಗಿ ನಡೆಸಲು ಸಲಹೆ ನೀಡುತ್ತೇನೆ ಎಂದಿದ್ದಾರೆ.
Advertisement
Advertisement
ತಾವು ಏಕಾಂಗಿಯಾಗಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿರುವುದನ್ನು ಮಾಧ್ಯಮಗಳ ಮೂಲಕ ನಾನು ಗಮನಿಸಿದ್ದೇನೆ. ಜೊತೆಗೆ ಅಧಿಕಾರಿಗಳು ಸಹಕರಿಸುತ್ತಿರುವುದನ್ನು ಸೂಕ್ಷ್ಮವಾಗಿ ಗ್ರಹಿಸಿದ್ದೇನೆ. ಬೃಹತ್ ಪ್ರಮಾಣದ ಪರಿಹಾರ ಕಾರ್ಯಗಳನ್ನು ರಾಜ್ಯ ಸರ್ಕಾರ ಒಂದೇ ನಡೆಸುವುದು ಕಷ್ಟಸಾಧ್ಯವಾಗಿರುವ ಕಾರಣ ಪ್ರಧಾನಿಗಳಿಗೆ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ತುರ್ತು ಪರಿಹಾರ ಕಾರ್ಯಗಳಿಗೆ ಕನಿಷ್ಟ 5 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಪತ್ರದ ಮೂಲಕ ಮನವಿ ಮಾಡಿದ್ದೇನೆ. ನೆರೆಯಿಂದ ನೊಂದ ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ ಹಾಗೂ ಅವರ ಜೀವನವನ್ನು ಪುನಃ ರೂಪಿಸುವಲ್ಲಿ ನನ್ನ ಮತ್ತು ನಮ್ಮ ಪಕ್ಷದ ಸಹಕಾರ ಮತ್ತು ಬೆಂಬಲವಿದೆ ಎಂದು ಎಚ್‍ಡಿಡಿ ತಿಳಿಸಿದ್ದಾರೆ.