ಹಾವೇರಿ: ರಾಜ್ಯದ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿಯುವುದು ಸುಲಭದ ಮಾತಲ್ಲ. ಅದರಲ್ಲೂ ಇತ್ತೀಚೆಗೆ ಸಿ.ಎಂ ಅಭ್ಯರ್ಥಿಗಳಿಗೆ ಪೈಪೋಟಿ ಹೆಚ್ಚಾಗಿದೆ. ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳು ಸೇರಿ, ಪ್ರತಿ ಪಕ್ಷದಲ್ಲೂ ಪ್ರಮುಖರು ಸಿಎಂ ಆಗುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶಿಗ್ಗಾಂವಿ (Shiggaavi) ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ಅದು ಬಯಸದೇ ಬಂದ ಭಾಗ್ಯವಾಗಿದೆ. ಏಕೆಂದರೆ ಈವರೆಗೆ ಈ ಕ್ಷೇತ್ರ ಇಬ್ಬರು ಮುಖ್ಯಮಂತ್ರಿಗಳನ್ನ ರಾಜ್ಯಕ್ಕೆ ಕೊಟ್ಟಿದೆ. ಮೊದಲಿಗೆ ಎಸ್. ನಿಜಲಿಂಗಪ್ಪ (1962-1968) (S Nijalingappa) ಅವರ ನಂತರ ಬಸವರಾಜ್ ಬೊಮ್ಮಾಯಿ.
ಬೊಮ್ಮಾಯಿಗೆ ಬಯಸದೆ ಬಂದ ಭಾಗ್ಯ: ಬಸವರಾಜ್ ಬೊಮ್ಮಾಯಿ ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ ನಾಯಕ ಎನಿಸಿಕೊಂಡಿದ್ದಾರೆ.
Advertisement
Advertisement
2008ರಲ್ಲಿ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಇದಕ್ಕೂ ಮುನ್ನ ವಿಧಾನಪರಿಷತ್ ಸದಸ್ಯನಾದ ಅನುಭವವಿತ್ತು. ಅದರಲ್ಲೂ 2006-2007ರಲ್ಲಿ ಬಿಜೆಪಿ ಮತ್ತು ಜೆಡಿಎಸ್ (JDS) ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ನಡೆಸಿದ್ದರು. ಈ ವೇಳೆ ರಾಜಕೀಯ ನಾಯಕನಾಗಿ ಸಾಕಷ್ಟು ಅನುಭವ ಪಡೆದುಕೊಂಡಿದ್ದರು. ಜೊತೆಗೆ ಸಾಕಷ್ಟು ಯೋಜನೆಗಳನ್ನೂ ಜಾರಿಗೆ ತಂದಿದ್ದರು. ನಂತರ 2013 ರಲ್ಲಿ ಕೆಜೆಪಿ-ಬಿಜೆಪಿ ಗದ್ದಲದ ನಡುವೆಯೂ ಬಿಜೆಪಿಯಿಂದ ಕಣಕ್ಕಿಳಿದು 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
Advertisement
Advertisement
2018ರಲ್ಲಿ 3ನೇ ಬಾರಿಗೆ ಗೆದ್ದು ಶಿಗ್ಗಾಂವಿ ಸವಣೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಯಡಿಯೂರಪ್ಪ ಅವರ ಪಕ್ಕಾ ಶಿಷ್ಯನಾಗಿ ರಾಜಕೀಯ ಪ್ರಾವೀಣ್ಯತೆ ಪಡೆದುಕೊಂಡರು. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಒಂದೂವರೆ ವರ್ಷಗಳ ಕಾಲ ಮುಂದುವರಿದಿತ್ತು. ಆದರೆ ಆಪರೇಷನ್ ಕಮಲದಿಂದಾಗಿ ಕಾಂಗ್ರೆಸ್, ಜೆಡಿಎಸ್‌ನ 17 ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಇದರಿಂದ ಸಮ್ಮಿಶ್ರ ಸರ್ಕಾರ ಆಡಳಿತ ಪತನಗೊಂಡಿತು. ನಂತರ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ (BS Yediyurappa) ಮುಖ್ಯಮಂತ್ರಿಯಾದರು. ಬೊಮ್ಮಾಯಿ ಗೃಹಖಾತೆ ಸಚಿವರಾದರು.
ಯಡಿಯೂರಪ್ಪ ಅವರ ರಾಜೀನಾಮೆ ನಂತರ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ಹಲವು ನಾಯಕರು ನಾ ಮುಂದು, ತಾ ಮುಂದು ಅಂತಾ ಸ್ಪರ್ಧೆಗಿಳಿದಿದ್ದರು. ಆದರೆ ಹೈಕಮಾಂಡ್ ಮತ್ತು ಯಡಿಯೂರಪ್ಪ ಕೃಪಾಕಟಾಕ್ಷದಿಂದ ಬಸವರಾಜ ಬೊಮ್ಮಾಯಿ ಸಿಎಂ ಆದರು. ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್ ಸೇರಿ ಹಲವು ಶಾಸಕರು ಸಿ.ಎಂ ರೇಸ್ ನಲ್ಲಿದ್ದರು. ಎಲ್ಲರನ್ನ ತಿರಸ್ಕಾರ ಮಾಡಿದ ಹೈಕಮಾಂಡ್ ಹಾಗೂ ಯಡಿಯೂರಪ್ಪ ಬಸವರಾಜ್ ಬೊಮ್ಮಾಯಿ ಅವರನ್ನ ಸಿಎಂ ಮಾಡಿದರು. ಆ ಮೂಲಕ ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದಿಂದ 2ನೇ ಮುಖ್ಯಮಂತ್ರಿಯಾಗಿ ಆಧಿಕಾರ ನಡೆಸುತ್ತಿದ್ದಾರೆ.
ಮೊದಲ ಸಿಎಂ ಯಾರು?
1967ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಏಕೀಕೃತ ಕರ್ನಾಟಕದ ಮೊದಲ ಸಿಎಂ ಎಸ್.ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾಗಿ ಮತ್ತೂಂದು ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಅಲ್ಲದೆ ಕರ್ನಾಟಕದಲ್ಲಿ ಸಿಎಂ ಆಗಿ 5 ವರ್ಷ ಅಧಿಕಾರ ಪೂರೈಸಿದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ.
ಇದು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರವಾಗಿದೆ. ಕಾಂಗ್ರೆಸ್ ಹೆಚ್ಚಿನ ಅವಧಿಗೆ ಆ ಸಮುದಾಯದವರಿಗೇ ಅವಕಾಶ ಕೊಟ್ಟಿದೆ. ಇಲ್ಲಿನ ಮತದಾರರು 8 ಬಾರಿ ಕಾಂಗ್ರೆಸ್, ಎರಡು ಬಾರಿ ಪಕ್ಷೇತರರು, ಒಂದು ಬಾರಿ ಜೆಡಿಎಸ್ ಹಾಗೂ 3 ಬಾರಿ ಬಿಜೆಪಿಗೆ ಮಣೆ ಹಾಕಿದ್ದಾರೆ. ನದಾಫ ಮೊಹಮ್ಮದ್ ಖಾಸೀಂಸಾಬ ಮರ್ಧಾನಸಾಬ ಅವರು 1972, 1978, 1983ರಲ್ಲಿ ಸತತವಾಗಿ 3 ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧಿಸಿದ್ದರು. 1985ರ ಚುನಾವಣೆಯಲ್ಲಿ ಖಾಸೀಂಸಾಬ ಅವರನ್ನು ಪಕ್ಷೇತರ ಅಭ್ಯರ್ಥಿ ಎನ್.ವಿ ಪಾಟೀಲ್ ಸೋಲಿಸಿದ್ದು ದಾಖಲೆಯಾಗಿದೆ. ಖಾಶೀಂಸಾಬ ನಂತರ ಎಂ.ಸಿ ಕುನ್ನೂರ ಎರಡು ಬಾರಿ ಹಾಗೂ ಹಾಲಿ ಶಾಸಕ ಬಸವರಾಜ ಬೊಮ್ಮಾಯಿಯವರು 2008, 2013 ಹಾಗೂ 2018 ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಈಗ ಸಿಎಂ ರಾಜ್ಯಭಾರ ಮಾಡುತ್ತಿದ್ದಾರೆ.
ಎಸ್. ನಿಜಲಿಂಗಪ್ಪ ಅವರು ಶಿಗ್ಗಾಂವಿ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿ 5 ವರ್ಷ ಅಧಿಕಾರ ಮಾಡಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಕೃಪಾಕಟಾಕ್ಷದಿಂದ ಸಿಎಂ ಆಗಿ ರಾಜ್ಯಭಾರ ಮಾಡುತ್ತಿದ್ದಾರೆ. ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.